ದರೋಜಿ ಈರಮ್ಮ ಪ್ರಶಸ್ತಿಗೆ ನಿಂಗಪ್ಪ ಮುದೇನೂರು, ಚೋರನೂರುಕೊಟ್ರಪ್ಪ, ಶಿವಮ್ಮ  ಮಾರೆಪ್ಪ ಆಯ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.೨೨: ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಸಾಹಿತಿ ಡಾ. ನಿಂಗಪ್ಪ ಮುದೇನೂರು, ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಚೋರನೂರು ಟಿ ಕೊಟ್ರಪ್ಪ,  ಹಳೇ ದರೋಜಿಯ ಬುರ‍್ರಕಥಾ ಶಿವಮ್ಮ ಮತ್ತು ಬುರ‍್ರಕಥಾ ಕಲಾವಿದ ಸೋಮಲಾಪುರದ ಬಲಗೊಲ್ಲ ಮಾರೆಪ್ಪ ಅವರನ್ನು ಆಯ್ಕೆಮಾಡಲಾಗಿದೆ.
ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವ ರಾಮು ಪತ್ರಿಕಾ ಹೇಳಿಕೆಯಲ್ಲಿ ಇದನ್ನು ತಿಳಿಸಿದ್ದಾರೆ.
  ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಾಡಿದ್ದು ಆ. ೨೪ ರಂದು ಶನಿವಾರ ಬೆ. ೧೦-೩೦  ಕ್ಕೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ
ರಾಯಚೂರು ವಿವಿ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಪ್ರದಾನ ಮಾಡಲಿದ್ದಾರೆ
ಕಾರ್ಯಕ್ರಮವನ್ನು ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ ರವಿ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ  ವಹಿಸುವರು.
 “ಬುರ‍್ರಕಥಾ ಪರಂಪರೆಯ ಅನನ್ಯತೆ” ಕುರಿತು ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಪ್ರೊ. ಚಲುವರಾಜು ಅವರು ಉಪನ್ಯಾಸ ನೀಡುವರು.
ಕಾರ್ಯಕ್ರಮ ವಿಶೇಷತೆ: ವಾರ್ತಾ ಇಲಾಖೆ ನಿರ್ಮಿಸಿರುವ ದರೋಜಿ ಈರಮ್ಮನವರ ಸಾಕ್ಷ್ಯಚಿತ್ರ, ಮಂಜುನಾಥ ಗೋವಿಂದವಾಡ ಅವರ ಕುಂಚದಲ್ಲಿ ಅರಳಿರುವ ರೇಖಾಚಿತ್ರ, ಡಾ.ಅಶ್ವ ರಾಮು ಸಂಗ್ರಹಿಸಿರುವ ಛಾಯಚಿತ್ರ, ಬರ‍್ರಕಥಾ ಗಾಯನ, ತತ್ವಪದ, ಜಾನಪದ ಗೀತಾಗಾಯನ, ವಚನ ಗಾಯನ ಮತ್ತು ಜನಪದ ನೃತ್ಯ ಪ್ರದರ್ಶನ ಇರುತ್ತದೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಡಾ. ನಿಂಗಪ್ಪ ಮುದೇನೂರು:
 ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ೦೧-೦೬-೧೯೭೦ ರಂದು ಜನನ. ತಂದೆ ನೀಲಪ್ಪ ತಾಯಿ ಗಂಗಮಾಳಮ್ಮ, ಇವರು ಎಂ.ಎ, ಎಂ.ಫಿಲ್ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಸಂಡೂರು ಸ್ನಾತಕೋತ್ತರ ಕೇಂದ್ರದ ನಂದಿಹಳ್ಳಿಯಲ್ಲಿ ಸೊಂಡೂರು ಕುಮಾರಸ್ವಾಮಿ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿಯನ್ನು, ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು ಎನ್ನುವ ವಿಷಯದಲ್ಲಿ ಪಿಎಚ್ ಡಿ ಪದವಿಯನ್ನು ಕನ್ನಡ ವಿವಿಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
  ‘
ಚೋರನೂರು ಕೊಟ್ರಪ್ಪ:
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಗ್ರಾಮದಲ್ಲಿ ತಂದೆ ದಿವಂಗತ ಡಾ. ಟಿ ಕೆ ಬಸವರಾಜ, ತಾಯಿ ದಿವಂಗತ ಶ್ರೀಮತಿ ರುದ್ರಮ್ಮನವರ ಮಗನಾಗಿ ದಿನಾಂಕ ೧೬.೦೭.೧೯೫೭ ರಂದು ಜನನ  ಎಂ.ಎ, ಎ ಎಲ್.ಎಲ್.ಬಿ ಪದವಿ ಪಡೆದಿದ್ದಾರೆ.
ಅರ್ಥಶಾಸ್ತ್ರದ ಉಪನ್ಯಾಸಕರಾಗಿ, ಜಿಲ್ಲಾ ವಾರ್ತಾಧಿಕಾರಿಗಳಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಉಪನಿರ್ದೇಶಕರಾಗಿ, ಉತ್ತಮ ಸಂಘಟಕರಾಗಿ, ಕಲಾಪ್ರೋತ್ಸಾಹಕರಾಗಿ, ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಪದೋನ್ನತ್ತಿ ಹೊಂದಿ ನಿವೃತ್ತಿಯನ್ನು ಹೊಂದಿದ್ದಾರೆ. ಪ್ರತಿಷ್ಟಿತ ಬಳ್ಳಾರಿ ಜಿಲ್ಲೆಯ ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿ, ಪ್ರಸ್ತುತ ಕಾರ್ಯಕಾರಿ ಸದಸ್ಯರಾಗಿ ಕಾರ್ಯನಿರ್ವಸುತ್ತಿದ್ದಾರೆ.
ಬುರ‍್ರಕಥಾ ಶಿವಮ್ಮ:
 ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇದರೋಜಿ ಗ್ರಾಮದ ಅಲೆಮಾರಿ ಬುಡ್ಗ ಜಂಗಮ ಸಮುದಾಯದವರಾಗಿದ್ದು,  ಇವರ ತಂದೆ ಅಶ್ವ ಲಾಲಪ್ಪ, ತಾಯಿ ನಾಗಮ್ಮ, ಸಹೋದರಿ ನಾಡೋಜ ಬರ‍್ರಕಥಾ ಈರಮ್ಮನವರ ಮೂಲಕ ಕಲಿತ ಬರ‍್ರಕಥೆ ಕಲೆಯಲ್ಲಿ ಕುಮಾರರಾಮನ ಕಾವ್ಯ, ಬೊಬ್ಬಿಲಿ ನಾಗಿರೆಡ್ಡಿ ಕಾವ್ಯ, ಬಾಲನಾಮ್ಮನ ಕಾವ್ಯ, ಕೃಷ್ಣಗೊಲ್ಲರ ಕಾವ್ಯ, ಮಾರವಾಡಿ ಶೇಠ್ ಕಾವ್ಯ, ದೇಶಿಂಗ ರಾಜನ ಕಾವ್ಯ, ಸ್ಯಾಸಿ ಚಿನ್ನಮ್ಮನ ಕಾವ್ಯ, ಆದೋನಿ ಲಕ್ಷö್ಮಮ್ಮನ ಕಾವ್ಯ, ಗಡೆಕಲ್ಲು ನಾಗಿರೆಡ್ಡಿ ಕಾವ್ಯ ಹೀಗೆ ಸುಮಾರು ೧೨ ಬರ‍್ರಕಥಾ ಮಹಾಕಾವ್ಯಗಳನ್ನು ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಹೇಳುತ್ತಾರೆ.
ಬಲಗೊಲ್ಲ ಮಾರೆಪ್ಪ ಸೋಮಲಾಪುರ: ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಬುರ‍್ರಕಥಾ ಕಲಾವಿದ. ಇವರ ತಂದೆ ಮಾರೇಪ್ಪ, ತಾಯಿ ಪೆದ್ದಕ್ಕ ಇವರು ಆಂಧ್ರ ಮತ್ತು ಕರ್ನಾಟಕದ ಗಡಿಭಾಗದಿಂದ ಬಂದು ಬುರ‍್ರಕಥಾ ಕಲಾ ಪ್ರದರ್ಶನ ನೀಡುತ್ತಾ ಜೀವನ ಸಾಗಿಸಿದ್ದಾರೆ.