ಆ.25 ಕಲ್ಬುರ್ಗಿಯಲ್ಲಿ ಪ್ರಥಮ ಗಜಲ್ ಸಮ್ಮೇಳನಪ್ರಭಾವತಿ ದೇಸಾಯಿ ಸಮ್ಮೇಳನಾಧ್ಯಕ್ಷೆ

*ಶ್ರೀನಿವಾಸ ಪ್ರಭು-ರಂಜಿನಿ ಅವರಿಂದ `ಗಜಲ್ ಜುಗಲ್ ಬಂದಿ
*ಇಡೀ ದಿನ `ಗಜಲ್ ಸಂಭ್ರಮ’ |
*ಗಜಲ್ ನಾದಲೋಕ’ ಕೃತಿ ಬಿಡುಗಡೆ
*100 ಕ್ಕೂ ಅಧಿಕ ಗಜಲಕಾರರು ಭಾಗಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಅ,22- ರಾಜ್ಯ ಮಟ್ಟದ ಪ್ರಥಮ ಗಜಲ್ ಸಮ್ಮೇಳನ ಕಲ್ಬುರ್ಗಿಯಲ್ಲಿ ಈ ತಿಂಗಳ 25 ರಂದು  ಕರ್ನಾಟಕ ಗಜಲ್ ಅಕಾಡೆಮಿಯಿಂದ  ಗುಲಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಅಬ್ದುಲ್ ಹೈ ತೋರಣಗಲ್ಲು ತಿಳಿಸಿದ್ದಾರೆ.
ಕನ್ನಡದಲ್ಲಿ ಗಜಲ್ ಆರಂಭಿಸಿದ ಆದ್ಯ ಗಜಲಕಾರ, ಗಜಲ್ ಗಾರುಡಿಗ ಶಾಂತರಸ ಅವರ ಹೆಸರಿನ ವೇದಿಕೆ ಹಾಗೂ ಗಜಲ್ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಂಬಣ್ಣ ಅಮರಚಿಂತ ರಾಯಚೂರು, ಚಂದ್ರಕಾಂತ ಕುಸನೂರ ಕಲಬುರಗಿ, ಅಬ್ದುಲ ಮಜೀದಖಾನ್ ಸಾಗರ, ಇಟಗಿ ಈರಣ್ಣ ಬಳ್ಳಾರಿ, ಸುಜಾತಾ ಲಕ್ಮನೆ ಬೆಂಗಳೂರು ಹಾಗೂ ರಮೇಶ ಹೆಗಡೆ ಸಿರಸಿ  ಹೆಸರಿನ ಮಹಾದ್ವಾರ ಇರುತ್ತವೆ. ವಿಜಯಪುರದ ಕವಯಿತ್ರಿ, ಒಂಬತ್ತು ಗಜಲ್ ಸಂಕಲನ ಸೇರಿ ೨೩ ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಯ ಗಜಲಕಾರ್ತಿ ಪ್ರಭಾವತಿ ದೇಸಾಯಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ.
೭೭ ವರ್ಷದ ಹಿರಿಯ ಗಜಲಕಾರ್ತಿ ಪ್ರಭಾವತಿ ದೇಸಾಯಿ, ಮೂಲತಃ ರಾಯಚೂರಿನವರು. ಕನ್ನಡದ ಗಜಲ್ ಹುಟ್ಟಿದ ಮೂಲ ನೆಲೆಯವರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿ ಅರ್ಜುಣಗಿ ದೇಸಾಯಿ ಮನೆತನದ ಸೊಸೆಯಾಗಿದ್ದು, ಇದೀಗ ವಿಜಯಪುರದಲ್ಲಿ ನೆಲೆಸಿದ್ದಾರೆ.
ಬೆಳಿಗ್ಗೆ ೧೦ ಕ್ಕೆ ಸಮಾರಂಭವನ್ನು ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಕಲಬುರಗಿಯ ಕವಯಿತ್ರಿ ಬಸ್ಸಮ್ಮ ಸಜ್ಜನ್ ಅವರು ಸಂಪಾದಿಸಿರುವ `ಗಜಲ್ ನಾದಲೋಕ’  ಕೃತಿಯನ್ನು ಗುಲಬರ್ಗ ವಿವಿ ಕುಲಪತಿ ಡಾ. ದಯಾನಂದ ಅಗಸರ ಬಿಡುಗಡೆ ಮಾಡುವರು.
 ಗುಲಬರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಅಧ್ಯಕ್ಷತೆ ವಹಿಸುವರು.
`ಸಮ್ಮೇಳನಾಧ್ಯಕ್ಷರ ಬದುಕು-ಬರಹ’ ಮೊದಲ ಗೋಷ್ಠಿಗೆ ಬೆಂಗಳೂರಿನ ಗಜಲಕಾರ ಸಂಗಮೇಶ್ ಬಾದವಾಡಗಿ ಚಾಲನೆ ನೀಡುವರು. ಬಳ್ಳಾರಿಯ ಗಜಲಕಾರ ಸಿಕಂದರ್ ಅಲಿ ಅಧ್ಯಕ್ಷತೆ ವಹಿಸುವರು. ಯುವ ಗಜಲಕಾರ ನಂರುಶಿ ಕಡೂರು ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಮಾತನಾಡುವರು.
ಗಜಲ್ ಹೆಜ್ಜೆ ಗುರುತು ಕುರಿತು ಎರಡನೇ ಗೋಷ್ಟಿಯನ್ನು ಮಂಗಳೂರಿನ ಗಜಲಕಾರ ಡಾ. ಸುರೇಶ್ ನೆಗಳಗುಳಿ ಚಾಲನೆ ನೀಡುವರು. ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅಧ್ಯಕ್ಷತೆ ವಹಿಸುವರು. ಸವದತ್ತಿಯ ವಿಮರ್ಶಕ ಡಾ. ಎಂ.ವೈ. ಯಾಕೋಳ್ಳಿ- ಗಜಲ್ ಆಕೃತಿ ಮತ್ತು ಆಶಯ,  ಅಂಕೋಲಾ ಗಜಲ್ ಕವಯಿತ್ರಿಶ್ರೀದೇವಿ ಕೆರೆಮನೆ- ಕನ್ನಡ ಸಾಹಿತ್ಯದಲ್ಲಿ `ಗಜಲ್’ ಹಾಗೂ  ಕೊಪ್ಪಳದ ಕವಯಿತ್ರಿ ಅರುಣಾ ನರೇಂದ್ರ – ಕಲ್ಯಾಣ ಕರ್ನಾಟಕ ನೆಲದಲ್ಲಿ `ಗಜಲ್’ ಕುರಿತು ಉಪನ್ಯಾಸ ನೀಡುವರು.
ನಂತರ ನಡೆಯುವ ಗಜಲ್ ವಾಚನ ಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಚಾಲನೆ ನೀಡುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ್ ಅಧ್ಯಕ್ಷತೆ ವಹಿಸುವರು. ಸುಮಾರು ೪೦ ಜನ ಗಜಲಕಾರರು ಭಾಗವಹಿಸುವರು.
ಗೋಷ್ಟಿ ನಾಲ್ಕರಲ್ಲಿ  `ನಿನ್ನ ಗಜಲಿಗೆ ನನ್ನ ಕವಿತೆ- ಜುಗಲ್‌ಬಂದಿ’ ಯನ್ನು ಸಿನಿಮಾ, ಕಿರುತೆರೆ ನಟ ಶ್ರೀನಿವಾಸಪ್ರಭು ಮತ್ತು ಡಾ. ರಂಜಿನಿಪ್ರಭು ಬೆಂಗಳೂರು ನಡೆಸಿಕೊಡುವರು.
ಮಂಗಳೂರಿನ ಹಿರಿಯ ಗಜಲಕಾರ ಮಹಮ್ಮದ ಬಡ್ಡೂರು ಚಾಲನೆ ನೀಡುವರು. ಕೊಪ್ಪಳ ಕವಯಿತ್ರಿ ಅನುಸೂಯ ಜಹಾಗೀರದಾರ್ ಅಧ್ಯಕ್ಷತೆ ವಹಿಸುವರು.
ಎರಡನೇ ಗಜಲ್ ವಾಚನ ಗೋಷ್ಟಿಯನ್ನು ಹಿರಿಯ ಗಜಲಕಾರ ಡಾ. ಕಾಶಿನಾಥ ಅಂಬಲಗೆ ಚಾಲನೆ ನೀಡುವರು. ಹುಬ್ಬಳ್ಳಿಯ ಗಜಲ್ ಕವಯಿತ್ರಿ ಡಾ. ರೇಣುಕಾತಾಯಿ ಸಂತಬಾ ಅಧ್ಯಕ್ಷತೆ ವಹಿಸುವರು. ಸಲ ೪೫ ಜನ ಗಜಲಕಾರರು ಭಾಗವಹಿಸುವರು.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ  ಗುಲ್ಬರ್ಗಾ ವಿ.ವಿ ಉರ್ದು-ಪರ್ಶಿಯನ್ ವಿಭಾಗ ಮುಖ್ಯಸ್ಥ ಪ್ರೊ. ಅಬ್ದುಲ್ ರಬ್ ಉಸ್ತಾದ್ ಸಮಾರೋಪ ನುಡಿಗಳಾಡುವರು.  ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಗಜಲಕಾರ ಬೋಡೆ ರಿಯಾಜ್ ಅಹ್ಮದ್ ಮುಖ್ಯ ಅತಿಥಿಗಳಾಗಿರುವರು. ರಾಯಚೂರಿನ ಗಜಲಕಾರ ಮಂಡಲಗಿರಿ ಪ್ರಸನ್ನ ಅಧ್ಯಕ್ಷತೆ ವಹಿಸುವರು.