ವೀರಶೈವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,22- ನಗರದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯದಲ್ಲಿ ನಿನ್ನೆ ಪ್ರತಿಭಾ ದಿನಾಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಸಂಘಗಳ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ವೀರಶೈವ ಮಹಾವಿದ್ಯಾಲಯಕ್ಕೆ 78 ದಶಕಗಳ ಸುದೀರ್ಘ ಇತಿಹಾಸ ಹಾಗೂ ಗುರುತ್ತರವಾದ ಸಾಧಕರ ಪರಂಪರಿಯೂ ಇದೆ. ಈ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆ ಹಾಗೂ ಘನ ಪದವಿಗಳಲ್ಲಿ ಇದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಿ ಈ ನಾಡಿನ ಭಾಗವಾಗಿ ಘನತೆಯನ್ನು ಹೆಚ್ಚಿಸಿದ್ಧಾರೆ. ನವ ಪೀಳಿಗೆ ವಿದ್ಯಾರ್ಥಿಗಳಾದ ನೀವು ಪ್ರತಿಭಾಶಾಲಿಗಳಾಗಿ ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಕುಟುಂಬಕ್ಕೆ, ವಿದ್ಯಾಲಯಕ್ಕೆ, ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ  ಅಲ್ಲಂ ಗುರುಬಸವರಾಜ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭಾರತಕ್ಕೆ ಭವ್ಯ ಪರಂಪರೆ ಇದೆ. ಈ ನಾಡಿಗೆ ವಿಶ್ವದಲ್ಲಿಯೆ ಸುಸಂಸ್ಕೃತ ನಾಡು ಎಂಬ ಹೆಗ್ಗಳಿಕೆಯು ಇದೆ. ಅದಕ್ಕೆ ಈ ನಾಡಿನ ಪ್ರಜೆಗಳ ಆದರ್ಶ, ನಡೆ, ನುಡಿ ಹಾಗೂ ಪರಂಪರೆ ಕಾರಣ. ಭವ್ಯ ಭಾರತವನ್ನು ಕಟ್ಟಬೇಕಾದರೆ ಯುವ ಪೀಳಿಗೆ ನಾಡಿಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಹೊಸ ಹೊಸ ತಂತ್ರಜ್ಞಾನ, ಕೌಶಲ್ಯಗಳನ್ನು ಅಳವಡಿಸಿಕೊಂಡು ನಾಡು ಗುರುತಿಸುವಂತ ಪ್ರತಿಭಾಶಾಲಿಗಳಾಗಿ ಹೊರ ಹೊಮ್ಮಬೇಕು. ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಉತ್ತಮ ಪ್ರತಿಭಾಶಾಲಿಗಳಾಗಿ ಹೊರ ಹೊಮ್ಮತ್ತಾರೆ. ಉತ್ತಮ ದೇಶ ಕಟ್ಟಬೇಕಾದರೆ, ಉತ್ತಮ ಪ್ರತಿಭಾವಂತ ಆದರ್ಶ ವಿದ್ಯಾರ್ಥಿಗಳ ಅವಶ್ಯಕತೆ ಇದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಎಸ್ ಕೆ ವಿವಿ ಕುಲ ಸಚಿವ ಎನ್.ಎಸ್.ರುದ್ರೇಶ್ ಕರೆ ಕೊಟ್ಟರು.
ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಲ್ಲ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಪ್ರಜಗಳಾಗಿ ನಾಡಿಗೆ ಕೀರ್ತಿ ತರಬೇಕು ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರು ಶಾಂತನಗೌಡರು ಆಶಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ಮನೋಹರ ಇವರು 2023-24 ಶೈಕ್ಷಣಿಕ ವಾರ್ಷಿಕ ವರದಿಯನ್ನು ವಾಚಿಸಿದರು. ಕ್ರೀಡೆ, ವಿಜ್ಞಾನ , ಕಲೆ ವಿವಿಧ ಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೊನೆಗೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ, ವೀ.ವಿ.ಸಂಘದ ಪದಾಧಿಕಾರಿಗಳಾದ ಜಾನೆಕುಂಟೆ ಬಸವರಾಜ,  ಡಾ.ಅರವಿಂದ್ ಪಾಟೀಲ್, ಯಾಳ್ಪಿ ಮೇಟಿ ಪಂಪನಗೌಡ,  ಬೈಲುವದ್ಧಿಗೇರಿ ಎರ್ರಿಸ್ವಾಮಿ, 
ಬೋಧಕ , ಬೋಧಕೇತರ ಸಿಬ್ಬಂಧಿ ಮತ್ತು ಸಮಸ್ತ ವಿದ್ಯಾರ್ಥಿಗಳು ಭಾಗವಹಿಸಿದ್ದರು . ಡಾ.ಶ್ಯಾಮೂರ್ತಿ.ಜಿ ಕಾರ್ಯಕ್ರಮವನ್ನು ನಿರೂಪಿಸಿದರು.