ಸವಿಧಾನ ಬದಲಾವಣೆ ಅಸಾಧ್ಯ: ಅನಂತರಾಜ
ದೇವದುರ್ಗ.ಆ೨೨: ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನ ಕರಡು ರಚನಾ ಸಮಿತಿ ಮುಖ್ಯಸ್ಥರಾದ ಅಂಬೇಡ್ಕರರೇ ಸಂವಿಧಾನದಲ್ಲಿ ಅವಕಾಶ ಕೊಟ್ಟಿರುವಂತೆ ಸಣ್ಣ ಪುಟ್ಟ ತಿದ್ದುಪಡಿ ಮಾಡಬಹುದೇ ಹೊರತು ಬದಲಾಯಿಸಲು ಸಾಧ್ಯವಿಲ್ಲ. ಆ ರೀತಿ ಆಗಲು ನಾವು ಬಿಡುವುದಿಲ್ಲ ಎಂದು ದೇನಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಅನಂತರಾಜ ನಾಯಕ ಹೇಳಿದರು.
ತಾಲೂಕಿನ ಅರಕೇರಾ ಪಟ್ಟಣದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಬುಧವಾರ ಗಬ್ಬೂರಿನ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ) ಆಯೋಜಿಸಿದ್ದ “ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೆಯೇ ಕರ್ತವ್ಯಗಳು ಪಾಲಿಸುವಲ್ಲಿ ಪ್ರತಿಯೊಬ್ಬರಲ್ಲಿ ಹಿಂಜರಿಕೆ ಮನೋಭಾವ ಇದೆ. ಇದು ದೂರವಾಗಬೇಕು.
ಶಿಕ್ಷಣ ನಮ್ಮ ಜೀವನವನ್ನು ಬದಲಾಯಿಸುತ್ತದೆ. ಸಂವಿಧಾನ ನಮಗೆ ಸಂವಿಧಾನಾತ್ಮಕವಾಗಿ ಶಿಕ್ಷಣದ ಹಕ್ಕನ್ನು ನೀಡಿದೆ. ಇಂದು ಮೂಲಭೂತ ಹಕ್ಕಾಗಿದೆ. ಯಾರೊಬ್ಬರೂ ಕೂಡ ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗದೆ, ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ಅನಂತರಾಜ ನಾಯಕ ಕರೆ ನೀಡಿದರು.
ಆರ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ ನಮ್ಮ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನವಾಗಿದ್ದು, ಸಂವಿಧಾನದ ಫಲವಾಗಿ ನಾವು ಎಲ್ಲ ರೀತಿಯ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ ಇದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್ ಸಂವಿಧಾನ ಪೀಠಿಕೆಗೆ ಮಾಲಾರ್ಪಣೆ ಮಾಡಿದರು.
ಹೆಗ್ಗಡದಿನ್ನಿ ಶಾಲಾ ಶಿಕ್ಷಕ ಚನ್ನಬಸವ ಉಪನ್ಯಾಸ ನೀಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಸಂವಿಧಾನ ಕುರಿತು ಮಾತನಾಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕೋಬ ನಾಯಕ ಸಂವಿಧಾನ ಪೀಠಿಕೆ ಬೋಧಿಸಿದರು.
ಸಂಸ್ಥೆಯ ಸಂಚಾಲಕ ಗುರುನಾಥ ಇಂಗಳದಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ನಮ್ಮ ಸಂವಿಧಾನದ ಕೇಳಿ ಬರುತ್ತಿರುವ ಅಪಸ್ವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಉಂಟಾಗುವ ಗೊಂದಲವನ್ನು ನಿವಾರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಗುರು ಮಂಜುಳಾ ಮಾತನಾಡಿ ಸಂವಿಧಾನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಅತ್ಯುತ್ತಮವಾದುದು ಎಂದು ತಿಳಿಸಿದರು.
ಸಂವಿಧಾನದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿನಯ್, ಸಬಿಯಾ ಫಾತೀಮಾ, ಶಿವಕಾಂತಿ, ಶಿವಪ್ಪ, ಭಾಗ್ಯಶ್ರೀ, ನಿಂಗಯ್ಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹಾಗೆಯೇ ಶಾಲಾ ಗ್ರಂಥಾಲಯಗಳಿಗೆ ಸಂವಿಧಾನದ ಪುಸ್ತಕಗಳನ್ನು ಸಂಸ್ಥೆ ವತಿಯಿಂದ ವಿತರಿಸಲಾಯಿತು.
ವೇದಿಕೆಯಲ್ಲಿ ಮುಖಂಡರಾದ ಚನ್ನವೀರಯ್ಯಸ್ವಾಮಿ ಹಿರೇಮಠ, ಸಂಸ್ಥೆ ಅಧ್ಯಕ್ಷ ಬಸವರಾಜ ಸಿಂಗ್ರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸೂಗೂರೇಶ ಗುಡಿ,ಶಿಕ್ಷಕರಾದ ಶ್ರೀಶೈಲ, ಮಂಜುನಾಥ, ವೀಣಾ, ಶಾಂತಾಬಾಯಿ, ಲಕ್ಷ್ಮಿ ರೆಡ್ಡಿ ಹೊಸೂರು, ಮುದುಕಪ್ಪ ನಾಯಕ, ಕೃಷ್ಣವೇಣಿ, ಅನ್ನಪೂರ್ಣ, ಮೈನಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅನಿತಾ ಸಂಗಡಿಗರ ಪ್ರಾರ್ಥನೆ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ ಸ್ವಾಗತಿಸಿದರೆ, ಚೆನ್ನಮಲ್ಲಪ್ಪ ಕಲ್ದೆ ನಿರೂಪಿಸಿದರು. ಮಲ್ಲಿಕಾರ್ಜುನ ವಂದಿಸಿದರು.