ಹುಬ್ಬಳ್ಳಿ – ಧಾರವಾಡ: ಮೀಟರ್ ಬಡ್ಡಿ ಕುಳಗಳಿಗೆ ಬಿಸಿ ಮಹಾನಗರದಲ್ಲಿ ಹಲವಾರು ಪ್ರಕರಣ ದಾಖಲು: ಚೆಕ್, ಆಯುಧ, ದಾಖಲಾತಿ ವಶ
ಹುಬ್ಬಳ್ಳಿ,ಆ22: ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಒಟ್ಟು 7 ಪ್ರಕರಣಗಳನ್ನು ದಾಖಲಿಸಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರು ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಂದ ಬಂದಂತಹ ದೂರಿನ ಆಧಾರದ ಮೇರೆಗೆ ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಆರೋಪಿಗಳ ಮೇಲೆ 2 ಪ್ರಕರಣ ದಾಖಲು ಮಾಡಿದ್ದು, ಹುಸೇನಸಾಬ್ ದೊಡ್ಡಮನಿ, ಅರ್ಬಾಜ ಮಕ್ತುಮಸಾಬ, ರಿಜ್ವಾನ್ ಬೆಟಗೇರಿ, ಅಮೀರ್ ಮುಲ್ಲಾನಿ ಇವರಿಂದ ಬಾಂಡ್ ಪೇಪರ್ ಗಳು, ಖಾಲಿ ಚೆಕ್, ಸಾಲದ ಮಾಹಿತಿಯಿರುವ ಬುಕ್ ಹಾಗೂ ಒತ್ತೆ ಇಟ್ಟುಕೊಂಡ 1 ಸ್ಕೂಟಿ ಮತ್ತು ವಾಹನದ ಮೂಲ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಆರೋಪಿಗಳ ಮೇಲೆ 2 ಪ್ರಕರಣ ದಾಖಲು ಮಾಡಿದ್ದು, ಜಾಫರ್, ಧಾರವಾಡ ನಿಜಾಮುದ್ದೀನ್ ಕಾಲೋನಿಯ ಮೊಪಿನ, ಸವಿತಾ ಕಳ್ಳಿಮನಿ, ರತ್ನವ್ವ ಗಂಭೀರ ಇವರಿಂದ ಒಂದು ಹೊಂಡಾ ಕಂಪನಿ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಆರೋಪಿಗಳ ಮೇಲೆ 2 ಪ್ರಕರಣ ದಾಖಲಾಗಿದ್ದು, ಚಕ್ರಪಾಣಿ ಕುಲಕರ್ಣಿ, ಕಷ್ಪೂದಿನ ಕಿಲ್ಲೇದಾರ, ಮಸೂದ್ದಿನ ಕಿಲ್ಲೆದಾರ ಹಾಗೂ ಇನ್ನೂ ಇಬ್ಬರನ್ನು ಬಂಧಿಸಲಾಗುವುದು ಎಂದ ಅವರು 3 ಬಾಂಡ್ ಗಳು ಹಾಗೂ 3 ಖಾಲಿ ಚೆಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಆರೋಪಿತರ ಮೇಲೆ 1 ಪ್ರಕರಣ ದಾಖಲಾಗಿದ್ದು, ಆದಿತ್ಯ ಸಣ್ಣತಂಗಿ, ಮಯೂರ ಚಾಕಲಬ್ಬಿ, ಮಹಾಂತೇಶ್ ಹೊಸಮನಿ, ಅಭಿಷೇಕ ಪಗಲಾಪೂರ, ಅರ್ಜುನ ಗಾಯಕವಾಡ, ಕೈಬೂಸಾಬ ಮುಲ್ಲಾ, ಅಜಯ ಸಿಂಗನಹಳ್ಳಿ, ಆನಂದ ಗೋಕಾಕ್, ಮಂಜುನಾಥ ಕೊರವರ, ಕಿರಣ್ ಕೊರವರ, ಕಿರಣ್ ದಾಮೋದರ್ ಹಾಗೂ ಗಣೇಶ್ ಇವರಿಂದ ಇವರಿಂದ ಸಾಲದ ವ್ಯವಹಾರದ ನಮೂದಿಸುವ ದಾಖಲೆಗಳು, 10 ವಿವಿಧ ಕಂಪನಿಯ ಮೊಬೈಲ್ ಫೋನ್ ಗಳು, 8 ದ್ವಿಚಕ್ರ ವಾಹನಗಳು, 2 ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮೂವರ ಬಂಧನ :
ಹುಬ್ಬಳ್ಳಿಯ ಕಾರವಾರ ರಸ್ತೆಯ ಗಿರಣಿಚಾಳದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಗೋಡೆ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ದುಷ್ಕರ್ಮಿಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾಜೀಬಾನ್ ಪೇಟ್ ನಿವಾಸಿಗಳಾದ ಪ್ರಶಾಂತ, ಕಾರ್ತಿಕ ಹಾಗೂ ತೊರವಿಹಕ್ಕಲನ ವಿವೇಕ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇನ್ನೂ ಸೋಮವಾರ ತಡರಾತ್ರಿ ಈ ಮೂವರು ಕಾರ್ ಡ್ರೈವಿಂಗ್ ಕಲಿಯಲು ಶಾಲೆ ಮುಂದಿರುವ ಮೈದಾನಕ್ಕೆ ಬಂದಿದ್ದರು, ಅದರಲ್ಲಿರುವ ಒರ್ವ ಡ್ರೈವಿಂಗ್ ಮಾಡುವ ಸಂದರ್ಭದಲ್ಲಿ ಏಕಾಏಕಿ ಶಾಲೆಯ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಕಾರಿನ ಲೈಟ್ ಹಾಗೂ ಇತರ ವಸ್ತುಗಳು ಸ್ಥಳದಲ್ಲಿ ಬಿದ್ದಿದ್ದವು. ಈ ಆಧಾರದ ಮೇರೆಗೆ ವಿಚಾರಣೆ ನಡೆಸಿದಾಗ ತಪ್ಪು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆಂದರು.