ಗಾಂಧೀಜಿ ಪ್ರಬಂಧ ಸ್ಪರ್ಧೆ
ಧಾರವಾಡ,ಆ22: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ, ಕಾಲೇಜು ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗುತ್ತಿರುವ ಪ್ರಬಂಧ ಸ್ಪರ್ಧೆಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವೂರಪ ಟಿ.ಕೆ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಉಪನಿರ್ದೇಶಕರು, ಪದವಿ ಕಾಲೇಜು ಶಿಕ್ಷಣ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಇನ್ನೊಬ್ಬರಿಗಾಗಿ ಬದುಕನ್ನು ಸವಿಸಿದ ಮಹಾನ್ ಚೇತನ. ಗಾಂಧೀಜಿಯವರ ವಿಚಾರಧಾರೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಹಾಗೂ ಯುವ ಜನರಲ್ಲಿ ಗಾಂಧೀಜಿಯವರ ಬದುಕು, ಸ್ವಾತಂತ್ರ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪ್ರಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಜನಗಳು ಇತ್ಯಾದಿ ವಿಚಾರಗಳ ಬಗ್ಗೆ ವಾರ್ತಾ ಇಲಾಖೆಯು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ಪ್ರಶಂಸಾರ್ಹನಿಯವಾಗಿದ್ದು ಎಲ್ಲ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಿಳಿಸಿದರು. ಎಲ್ಲ ಶಿಕ್ಷಣ ವಿಭಾಗದ ಅಧಿಕಾರಿಗಳು ಈ ಪ್ರಬಂಧ ಸ್ಪರ್ಧೆ ಕುರಿತು ವಾಟ್ಸಪ್ ಗ್ರೂಪ್ ಒಂದನ್ನು ರಚಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ಸಲಹೆ ನೀಡುವಂತೆ ತಿಳಿಸಿದರು.
ಪ್ರಬಂಧ ಸ್ಪರ್ಧೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ವಿವಿಧ ವಿಭಾಗಗಳ ಸ್ಪರ್ಧೆಗಳ ಕುರಿತಾದ ವಿಷಯಗಳ ಬಗ್ಗೆ ನಿಭಂದನೆಗಳ ಬಗ್ಗೆ ಹಾಗೂ ಬಹುಮಾನಗಳ ಕುರಿತು ವಿವರಿಸಿದರು.
ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲು ಉದ್ದೇಶಿಸಲಾಗಿದೆ. ವಿಜೇತರಿಗೆ ರಾಜ್ಯಮಟ್ಟದಲ್ಲಿ ಪ್ರಥಮ 31 ಸಾವಿರ ರೂ. ದ್ವಿತೀಯ 21 ಸಾವಿರ ರೂ. ಮತ್ತು ತೃತೀಯ 11 ಸಾವಿರ ರೂ. ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಥಮ 3 ಸಾವಿರ ರೂ. ದ್ವಿತೀಯ 2 ಸಾವಿರ ರೂ ಮತ್ತು ತೃತೀಯ 1 ಸಾವಿರ ರೂ. ಬಹುಮಾನ ನೀಡಲಾಗುವುದು.
ಪ್ರೌಢ ಶಾಲಾ ವಿಭಾಗ :- 1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, 2) ಗಾಂಧೀಜಿಯವರ ವಿಚಾರದಲ್ಲಿ ಸತ್ಯಾಗ್ರಹ, 3) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, 4) ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 900 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಪೂರ್ವ ಶಿಕ್ಷಣ ವಿಭಾಗ :- 1) ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, 2) ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು, 3) ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ, 4) ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 1500 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ :- 1) ಇಂದಿನ ಪ್ರಜಾಪ್ರಭುತ್ವದಲ್ಲಿ ಸತ್ಯಾಗ್ರಹದ ಮಹತ್ವ, 2) ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು, 3) ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು, 4) ಗಾಂಧೀಜಿಯವರ ವಿಚಾರದಲ್ಲಿ ಸತ್ಯದ ಪರಿಕಲ್ಪನೆ, 5) ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳು. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಸುಮಾರು 2000 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.
ದಿನಾಂಕ:06-09-2024 ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಸ್ಪರ್ಧೆ ಏರ್ಪಡಿಸಿ ದಿನಾಂಕ : 10-09-2024 ರೊಳಗಾಗಿ ಮೌಲ್ಯಮಾಪನ ಮಾಡಿ, ವಿಜೇತರ ವಿವರಗಳು ಹಾಗೂ ಪ್ರಬಂಧಗಳನ್ನು ಕೇಂದ್ರ ಕಚೇರಿಗೆ ಕಳುಹಿಸಲಿದೆ. ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ, ರಾಜ್ಯಮಟ್ಟದ ಫಲಿತಾಂಶ ಘೋಷಿಸಲಾಗುವುದು.
ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು (3) ಪ್ರಬಂಧಗಳಿಗೆ ಅಕ್ಟೋಬರ್ 02 ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರಬಂಧ ರಚನೆಕಾರರಿಗೆ ಗೌರವಿಸಲಾಗುವುದು.
ಡಿಡಿಪಿಯು ಕೆ.ಸುರೇಶ, ಡಿಡಿಪಿಐ ಕಚೇರಿಯ ವಿಷಯ ನಿರ್ವಾಹಕ ರೇಖಾ ಬಜಂತ್ರಿ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಕಾಣಕೋಣಕರ ಸಭೆಯಲ್ಲಿ ಉಪಸ್ಥಿತರಿದ್ದರು.