ಬದಲಾದ ಜೀವನ ಶೈಲಿ ಕಾಯಿಲೆಗೆ ಮೂಲ
ಸಂಜೆವಾಣಿ ನ್ಯೂಸ್
ಮೈಸೂರು: ಆ.22:- ಬದಲಾದ ಜೀವನ ಶೈಲಿ, ದೈಹಿಕ ಚಟುವಟಿಕೆಯ ಕೊರತೆ ಮರೆಗುಳಿ ಸೇರಿದಂತೆ ಸಾಕಷ್ಟು ಕಾಯಿಲೆಗೆ ಮೂಲ. ಹೀಗಾಗಿ ಪ್ರತೀ ದಿನ ಯೋಗ ಸೇರಿದಂತೆ ಇನ್ನಿತರ ದೈಹಿಕ ಚಟುವಟಿಕೆ ನಡೆಸುವ ಮೂಲಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಹೇಳಿದರು.
ಬುಧವಾರ ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಅಲ್‍ಜೈಮರ್ ಸೋಸೈಟಿ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಬುದ್ಧಿಮಾಂದ್ಯ ಸ್ನೇಹಿ ಮೈಸೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ಕಳೆದ 55 ವರ್ಷಗಳಿಂದ ಪ್ರತೀ ದಿನ ಒಂದು ಗಂಟೆ ಯೋಗಾಭ್ಯಾಸ ಹಾಗೂ ಸೂರ್ಯ ನಮಸ್ಕಾರ ಮಾಡುತ್ತೇನೆ. ಇದರಿಂದ ನಾನು ಆರೋಗ್ಯವಾಗಿದ್ದೇನೆ. ಯಾರು ದೈಹಿಕವಾಗಿ ಆರೋಗ್ಯವಾಗಿರುತ್ತಾರೋ ಅವರು ಮಾನಸಿಕವಾಗಿವೂ ಸದೃಢರಾಗಿರುತ್ತಾರೆ ಎಂದು ಹೇಳಿದರು.
ಲಾಲ್‍ಕೃಷ್ಣ ಅಡ್ವಾಣಿ ಅವರಿಗೆ 94 ವಯಸ್ಸು, ಎಚ್.ಡಿ.ದೇವೇಗೌಡ ಅವರು 94 ವರ್ಷದವರು. ಅವರುಗಳು ಇಂದಿಗೂ ಯೋಗಾಭ್ಯಾಸ ಮಾಡುತ್ತಾರೆ. ಇದರಿಂದಾಗಿಯೇ ಆರೋಗ್ಯವಂತರಾಗಿದ್ದಾರೆ. ಯೋಗ ಮೈಸೂರಿನ ಹೆಗ್ಗುರುತು. ಹೀಗಾಗಿ ನೀವುಗಳು ಪ್ರತೀ ದಿನ ಯೋಗ ಅಥವ ವಾಯು ವಿಹಾರಕ್ಕೆ ಸಮಯ ಮೀಸಲಿಡಬೇಕು ಎಂದರು.
ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಗಜಾನನಹೆಗಡೆ, ಬದಲಾದ ಆಹಾರ ಕ್ರಮ, ಮಧುಮೇಹ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇಂದು ನಮ್ಮ ಆರೋಗ್ಯ ಹದಗೆಡುತ್ತಿದೆ ಎಂದರು.
ಎಆರ್‍ಡಿಎಸ್‍ಐ ಅಧ್ಯಕ್ಷ ಡಾ.ಹನುಮಂತಾಚಾರ್ ಜೋಶಿ ಮಾತನಾಡಿ, ಮರೆಗುಳಿ ಕಾಯಿಲೆಗೆ ಸಂಬಂದಿಸಿದಂತೆ ಹಲವಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ಇದೀಗ ಬುದ್ದಿಮಾಂದ್ಯ ಸ್ನೇಹಿ ಮೈಸೂರು ಎಂಬ ಕಾರ್ಯಕ್ರಮದ ಮೂಲಕ ಜನರಿಗೆ ನೆರವಾಗುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಮೇಘಾಲಯಕ್ಕೆ ಬನ್ನಿ
ಮೇಘಾಲಯ ಒಂದು ಅತ್ಯುತ್ತಮ ಪ್ರವಾಸಿ ತಾಣ. ಇದೀಗ ಮೆಘಾಲಯ ನಮ್ಮದು ಎಂಬ ಭಾವನೆಯಿಂದ ಅಲ್ಲಿಗೆ ಬನ್ನಿ. ಅಲ್ಲಿನ ಸೌಂದರ್ಯ ಆಸ್ವಾದಿಸಿ ಎಂದು ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಆಹ್ವಾನಿಸಿದರು.
ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾಸೋದ್ಯಮದ ವಿಚಾರಕ್ಕೆ ಬಂದರೆ ಮೈಸೂರು ಉತ್ತಮ. ಅದರಂತೆ ಮೇಘಾಲಯ ಕೂಡ ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಮೇಘಾಲಯ ಮಹಿಳಾ ಪ್ರಾಬಲ್ಯವಿರುವ ರಾಜ್ಯ. ಅಲ್ಲಿ ವಿವಾಹ ನಡೆದರೆ ವರನೇ ಪತ್ನಿಯ ಮನೆಗೆ ತೆರಳಬೇಕು. ಆಸ್ತಿ ಹಕ್ಕು ಕೂಡ ಅಲ್ಲಿ ಮಹಿಳೆಯರಿಗೇ ಮೀಸಲು. ಮನೆಯ ಕಿರಿಯ ಮಗಳಿಗೆ ಆಸ್ತಿ ಹಕ್ಕನ್ನು ನೀಡಲಾಗುತ್ತದೆ ಎಂದು ಹೇಳಿದ ಅವರು, ಅಲ್ಲಿನ ಅಧಿಕಾರಿಗಳು ಹೇಳುವಂತೆ ಇಡೀ ರಾಜ್ಯದಲ್ಲಿ ಒಬ್ಬನೇ ಒಬ್ಬ ಭಿಕ್ಷುಕ ಇಲ್ಲ ಎಂದರು.
ಆಯುರ್ವೇದ ಸಂಶೋಧನಾಲಯ ಕೇಂದ್ರದ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶಣೈ, ರೋಟರಿ ಮೈಸೂರು ಅಧ್ಯಕ್ಷ ಪ್ರವೀಣ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.