ದಸರಾ ದೀಪಾಲಂಕಾರಕ್ಕೆ ಹೊಸ ಮೆರುಗು
ಸಂಜೆವಾಣಿ ನ್ಯೂಸ್
ಮೈಸೂರು: ಆ.22:- ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಸರಾ ದೀಪಾಲಂಕಾರವನ್ನು ಈ ವರ್ಷ ಇನ್ನಷ್ಟು ಆಕರ್ಷಕವಾಗಿಸಲು ಪ್ರಾಯೋಜಕರು ಸೂಕ್ತ ಸಲಹೆ, ಸಹಕಾರ ನೀಡುವಂತೆ ಶಾಸಕರೂ ಆದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ದಸರಾ ಮಹೋತ್ಸವ-2024ರ ದೀಪಾಲಂಕಾರ ಸಮಿತಿ ವತಿಯಿಂದ ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಇತರೆ ಪ್ರಾಯೋಜಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು,
ಕಳೆದ ಬಾರಿಗಿಂತ ಈ ಬಾರಿಯ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕೆಂದು ಮುಖ್ಯಮಂತ್ರಿಗಳು ಈಗಾಗಲೇ ಉನ್ನತ ಮಟ್ಟದ ಸಭೆಯಲ್ಲಿ ಸೂಚಿಸಿದ್ದಾರೆ. ಹಾಗಾಗಿ, ಈ ಬಾರಿ ದಸರಾ ದೀಪಾಲಂಕಾರವನ್ನು ಆಕರ್ಷಣೀಯ ಹಾಗೂ ವಿನೂತನ ರೀತಿಯಲ್ಲಿ ಮಾಡಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಮುನಿಗೋಪಾಲ್ ರಾಜು ಮಾತನಾಡಿ, ದಸರಾ ಉತ್ಸವದಲ್ಲಿ ದೀಪಾಲಂಕಾರ ಅತ್ಯಂತ ಆಕರ್ಷಣೀಯವಾಗಿರಲಿದೆ. ಹೀಗಾಗಿ ಕಳೆದ 3-4 ವರ್ಷಗಳಿಂದ ದಸರಾ ದೀಪಾಲಂಕಾರಕ್ಕೆ ವಿಶೇಷ ಮೆರಗು ನೀಡುವ ಮೂಲಕ ಅದರ ಆಕರ್ಷಣೆ ಹೆಚ್ಚುವಂತೆ ಮಾಡಲಾಗಿದೆ. ಈ ವರ್ಷ ವಿಜೃಂಭಣೆಯ ದಸರಾ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ದೀಪಾಲಂಕಾರವನ್ನು ಇನ್ನಷ್ಟು ಆಕರ್ಷಕವಾಗಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಿರುವ ಪ್ರಾಯೋಜಕರು ಯಾವ ಪರಿಕಲ್ಪನೆಯಲ್ಲಿ ದೀಪಾಲಂಕಾರ ಮಾಡುತ್ತಾರೆ ಎಂಬುದನ್ನು ಮೊದಲೇ ತಿಳಿಸಬೇಕಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದಸರಾ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕಿದೆ. ಇದರಿಂದಾಗಿ ಅವರಿಂದ ಹೊಸ ಆಲೋಚನೆಗಳು ದೊರೆಯಲಿದ್ದು, ದಸರಾ ದೀಪಾಲಂಕಾರ ಆಕರ್ಷಣೀಯಗೊಳಿಸಲು ಸಹಾಯವಾಗಲಿದೆ ಎಂದರು.
ಸಭೆಯಲ್ಲಿ ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವುದರೊಂದಿಗೆ ಜನರ ಸುರಕ್ಷತೆಗೂ ಆದ್ಯತೆ ನೀಡಬೇಕೆಂದು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಪ್ರಾಯೋಜಕರು, ವಿದ್ಯುತ್ ಗುತ್ತಿಗೆದಾರರು ದೀಪಾಲಂಕಾರವನ್ನು ಆಕರ್ಷಣೀಯಗೊಳಿಸುವ ಕುರಿತಾಗಿ ಸಲಹೆ ನೀಡಿದರು.
ಸಭೆಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ರಮೇಶ್, ಸೆಸ್ಕ್ ಹಣಕಾಸು ನಿರ್ದೇಶಕ ಶೇಖ್ ಮಹೀಮುಲ್ಲಾ, ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಹಾಗೂ ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕೆಗಳ ಪ್ರಮುಖರು ಭಾಗವಹಿಸಿದ್ದರು.