ವನ್ಯಜೀವಿ ಸಂರಕ್ಷಣೆ ದೇಶಕ್ಕೆ ಅಗತ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಆ.22:- ಆನೆ ಎಂಬುದು ಒಂದು ದೊಡ್ಡ ಸಂದೇಶ ನೀಡುತ್ತದೆ. ಆನೆ ಎಂಬುದು ಕಾಡಿನ ಸಂಪತ್ತು. ವನ್ಯ ಜೀವಿಗಳು ಹಾಗೂ ವನ್ಯ ಸಂರಕ್ಷಣೆ ದೇಶಕ್ಕೆ ಅತ್ಯಗತ್ಯ. ಪರಿಸರ ಸಂರಕ್ಷಣೆ ಹಾಗೂ ವನ್ಯ ಸಂರಕ್ಷಣೆ ಮಾಡದಿದ್ದರೆ ಮಾನವ ಉಳಿಯುವುದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ವೀರನಹೊಸಹಳ್ಳಿಯಲ್ಲಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಕಾಡಿನಿಂದ ನಾಡಿಗೆ ಸ್ವಾಗತಿಸುವ ಗಜಪಯಣಕ್ಕೆ ಚಾಲನೆ ನೀಡಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷ ಮೈಸೂರಿನಲ್ಲಿ 40 ಡಿಗ್ರಿವರೆಗೆ ಉಷ್ಣಾಂಶ ಇತ್ತು. ಇದಕ್ಕೆ ಕಾರಣ ಪರಿಸರವನ್ನು ಹಾಳು ಮಾಡುತ್ತಿರುವುದು. ಆದ್ದರಿಂದ ಪರಿಸರವನ್ನು ರಕ್ಷಿಸಲು ಎಲ್ಲರೂ ಪಣತೊಡಬೇಕು ಎಂದು ತಿಳಿಸಿದರು.
ಅರ್ಜುನ ಆನೆ 14 ಬಾರಿ ದಸರಾದಲ್ಲಿ ಭಾಗವಹಿಸಿ, 9 ಬಾರಿ ಅಂಬಾರಿ ಹೊತ್ತಿತ್ತು. ಆನೆಯೊಂದಿಗೆ ಕಾದಾಟದಲ್ಲಿ ವೀರ ಮರಣ ಹೊಂದಿತು. ಮಾನವ ಹಾಗೂ ಪ್ರಾಣಿ ಸಂಘರ್ಷ ನಡೆಯಲು ಕಾರಣ ಅರಣ್ಯ ನಾಶ ಮತ್ತು ಒತ್ತುವರಿ ಮಾಡುತ್ತಿರುವುದು ಇದನ್ನು ತಡೆಗಟ್ಟಬೇಕು ಎಂದರು.
ಈ ಬಾರಿ ನಾಡಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಆದ್ದರಿಂದ ಮುಖ್ಯಮಂತ್ರಿ ಗಳು ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತಿಳಿಸಿದ್ದಾರೆ. ಅದರಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಕಿರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇಂದು ಗಜ ಪಯಣಕ್ಕೆ ಚಾಲನೆ ನೀಡಲಾಗಿದೆ. ಅರ್ಜುನ ಆನೆ ಪುಂಡಾನೆಯೊಂದಿಗೆ ಹೋರಾಡಿ ವೀರ ಮರಣ ಹೊಂದಿತು. ಇದಕ್ಕೆ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗವಹಿಸುತ್ತಿವೆ. ಇಂದು 9 ಆನೆಗಳನ್ನು ಬರಮಾಡಿಕೊಳ್ಳಲಾಗಿದೆ. 2ನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ.
ಮೈಸೂರಿನ ಅಂದಿನ ಮಹಾರಾಜರಾದ ಜಯ ಚಾಮರಾಜೇಂದ್ರ ಒಡೆಯರ್ ಹೆಚ್.ಡಿ.ಕೋಟೆಯ ಮಾಸ್ತಿ ಗುಡಿ ಬಳಿ ಆನೆಗಳಿಗೆ ಪೂಜೆ ಮಾಡಿ ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಈಗ ವೀರನ ಹೊಸಹಳ್ಳಿ ಬಳಿ ಚಾಲನೆ ನೀಡಲಾಗುತ್ತಿದೆ. ಅನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದರು.
ಜಗತ್ತಿನ ಅತಿ ದೊಡ್ಡ ಸವಾಲು ಹವಾಮಾನ ಬದಲಾವಣೆ. ಹವಾಮಾನ ವೈಪರಿತ್ಯ ತಡೆಗಟ್ಟಲು ಅರಣ್ಯ ಸಂರಕ್ಷಣೆ ಮಾಡಬೇಕು. ಕೇರಳದ ವಯನಾಡು ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿ ಅಪಾರ ಪ್ರಮಾಣದ ಸಾವು ನೋವು ಆಸ್ತಿ ಪಾಸ್ತಿ ಹಾನಿ ಆಗಿದೆ. ಅರಣ್ಯ ಸಂರಕ್ಷಣೆ ಕಾಯ್ದೆ ಇರುವುದರಿಂದ ಇಂದು ಕಾಡನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಮಾನವ ಮತ್ತು ಪ್ರಾಣಿ ಸಂಘರ್ಷಣೆ ನಡೆಯುತ್ತಿದೆ. ಪ್ರತಿ ವರ್ಷ 20 ರಿಂದ 30 ಜನ ಆನೆ ತುಳಿತದಿಂದ ಮರಣ ಹೊಂದುತ್ತಿದ್ದಾರೆ. ಇದನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅರಣ್ಯ ವಸತಿ ಧಾಮಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ಮಾತನಾಡಿ, ದಸರಾಕ್ಕೆ ಮೆರಗು ಇರುವುದು ಅಂಬಾರಿ ಹೊರುವುದು. ಅರ್ಜುನ ಆನೆ 9 ಬಾರಿ ಅಂಬಾರಿ ಹೊತ್ತಿತ್ತು. ಇದು ವೀರ ಮರಣ ಹೊಂದಿದ್ದು ಇದರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ದಸರಾ ಹೈ ಪವರ್ ಕಮಿಟಿ ಸಭೆಯಲ್ಲಿ ಮನವಿ ಮಾಡಿದ್ದೇನೆ. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿದ್ದು ಇದು ನಮಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, ಮೈಸೂರು ದಸರಾ 413 ವರ್ಷ ಗಳಿಂದ ನಡೆದುಕೊಂಡು ಬಂದಿದೆ. ಕಳೆದ ಬಾರಿ ಸರಳ ದಸರಾ ನಡೆಯಿತು. ಈ ಬಾರಿ ಆದ್ದೂರಿ ದಸರಾ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ತಿಳಿಸಿದ್ದು ಇದು ಸಂತಸ ತಂದಿದೆ. ಹುಣಸೂರು ತಾಲೂಕು ಹಿಂದುಳಿದಿದ್ದು, ಕಾಡಂಚಿನ ಪ್ರದೇಶವಾಗಿದೆ. ಪ್ರಾಣಿ ಮತ್ತು ಮಾನವ ನಡುವೆ ಸಂಘರ್ಷ ನಡೆಯುತ್ತಿದೆ. ಕಳೆದ ವರ್ಷ ಸೂಕ್ತ ಪರಿಹಾರ ಕೊಡಿಸಲಾಗಿತ್ತು. ಕಾಡಂಚಿನ ಗಡಿ ವಿವಾದ ನಡೆಯುತ್ತಿದೆ. ಸರ್ಕಾರ ಸಭೆ ನಡೆಸಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ರೈತರಿಗೆ ತೊಂದರೆಯಾಗಬಾರದೆಂದು ಕಳೆದ ಬಾರಿ ಮನವಿ ಮಾಡಿದೆ ಇನ್ನೂ ಆಗಿಲ್ಲ ಶೀಘ್ರವೇ ಕ್ರಮ ವಹಿಸಿ ಎಂದರು. ಇದೇ ವೇಳೆ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಫಲ ತಾಂಬೂಲ ನೀಡಿ ಆಹ್ವಾನ: ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವ ಮೊದಲ ತಂಡದ 9 ಆನೆಗಳ ಕಾವಾಡಿಗಳು ಮತ್ತು ಮಾವುತರಿಗೆ ಗಜಪಯಣದ ವೇದಿಕೆ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಫಲ ತಾಂಬೂಲ ನೀಡಿ ಸ್ವಾಗತಿಸಿದರು. ಈ ವೇಳೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳಿಗೂ ಫಲ-ತಾಂಬೂಲ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಸಂಸದ ಸುನಿಲ್ ಬೋಸ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಶಾಸಕ ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ದೊಡ್ಡ ಹೆಜ್ಜೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಬಿಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.