ರಾಮಾಪುರದಲ್ಲಿ ಮೇಲ್ದರ್ಜೆಗೊಂಡ ಸಮುದಾಯ ಆರೋಗ್ಯ ಕೇಂದ್ರ, ಡಯಾಲಿಸಿಸ್ ಕೇಂದ್ರ ಉದ್ಘಾಟನೆ
ಸಂಜೆವಾಣಿ ವಾರ್ತೆ
ಹನೂರು.ಆ.22:- ತಾಲೂಕಿನ ರಾಮಾಪುರದಲ್ಲಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿದ ಹಾಗೂ ನೂತನ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ ನೆರವೇರಿತು.
ಶಾಸಕರಾದ ಎಂ.ಆರ್. ಮಂಜುನಾಥ್ ಉದ್ಘಾಟನೆ ನೆರವೇರಿಸಿ ಮಾತನಾಡಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಿರುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಕಿಡ್ನಿ ಸಮಸ್ಯೆ ಇರುವವರು ಡಯಾಲಿಸಿಸ್‍ಗಾಗಿ ಚಾಮರಾಜನಗರ, ಕೊಳ್ಳೇಗಾಲ, ಮೈಸೂರು, ತಮಿಳುನಾಡಿಗೆ ಹೋಗಬೇಕಿತ್ತು. ಇಲ್ಲಿಯೇ ಡಯಾಲಿಸಿಸ್ ಸೇವೆ ಲಭ್ಯವಾಗುವುದರಿಂದ ರೋಗಿಗಳಿಗೆ ಪ್ರಯೋಜನವಾಗಲಿದೆ ಎಂದರು.
ಹನೂರು ವಿಧಾನಸಭಾ ಕ್ಷೇತ್ರವು ಭೌಗೋಳಿಕವಾಗಿ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಇಲ್ಲಿನ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜೊತೆ ಮಾತನಾಡಿ ಮಾಹಿತಿ ನೀಡಿದ್ದೇನೆ. ಅವರು ಕೂಡ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಶಾಸಕರಾದ ಎಂ.ಆರ್.ಮಂಜುನಾಥ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಜಿಲ್ಲೆಯ ಐದು ತಾಲೂಕುಗಳ ಪೈಕಿ ಹನೂರು ತಾಲೂಕಿನಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚು ಇವೆ. ಅನಾರೋಗ್ಯ ಕಾಣಿಸಿಕೊಂಡಾಗ ಸಾಕಷ್ಟು ಕಿಲೋಮೀಟರ್ ತೆರಳಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೀಗಾಗಿ ಸ್ಥಳೀಯವಾಗಿ ಹೆಚ್ಚಿನ ಆರೋಗ್ಯ ಸೇವೆಗೆ ಒತ್ತು ನೀಡಬೇಕಿದೆ ಎಂದರು.ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿರುವುದರಿಂದ ತಜ್ಞ ವೈದ್ಯರ ಸೇವೆ, ಔಷದೋಪಚಾರ ಸಮರ್ಪಕವಾಗಿ ಲಭ್ಯವಾಗಲಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ನೀಡಬೇಕು. ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಬೇಕು. ರೋಗಿಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಹನೂರು ತಾಲೂಕು ಕೇಂದ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮವಹಿಸ ಬೇಕಿದೆ. ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಆಸ್ಪತ್ರೆ ನಿರ್ಮಾಣವಾಗುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಅವರು ಮಾತನಾಡಿ ಹನೂರು ತಾಲೂಕು ಕೇಂದ್ರವಾಗಿದ್ದರೂ ತಾಲೂಕು ಆಸ್ಪತ್ರೆ ಇಲ್ಲದೆ ಇರುವ ಕಾರಣ ಡಯಾಲಿಸಿಸ್ ಕೇಂದ್ರ ತೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರವೇ ಕೆಲವು ನಿಯಮಗಳನ್ನು ಸಡಿಲಗೊಳಿಸಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಅನುಮತಿ ನೀಡಿರುವುದರಿಂದ ಅನುಕೂಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಪರಿಶ್ರಮದಿಂದ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಿದೆ ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಇಲಾಖೆ ಬದ್ದವಾಗಿದೆ ಎಂದರು.
ಇದೇ ವೇಳೆ ಹೊಸ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ರಾಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್, ವೈ.ಕೆ. ಗುರುಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ಡಾ. ಮನು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.