ಸೋಮಶೇಖರ್ ಕೋಲಾರದ ಮೊದಲ ಛಾಯಾಚಿತ್ರ ಪತ್ರಕರ್ತ
ಕೋಲಾರ,ಆ.೨೨- ಕೋಲಾರ ಜಿಲ್ಲೆಯ ಮೊದಲನೇ ಛಾಯಾಚಿತ್ರ ಪತ್ರಕರ್ತ ಜಿ.ಸೋಮಶೇಖರ್ ಅವರಾಗಿದ್ದರು. ಕೆಲಸದಲ್ಲಿ ಅವರಿಗಿದ್ದ ಬದ್ಧತೆ, ಶ್ರದ್ಧೆ ನಾವು ಸಹ ಅನುಸರಿಸುವಂತಾಗಬೇಕೆಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಜಗನ್ನಾಥ್ ಪ್ರಕಾಶ್ ಅಭಿಪ್ರಾಯಪಟ್ಟರು.
ವಿಶ್ವ ಛಾಯಾಗ್ರಹಣ ದಿನಾಚರಣೆ ಸಲುವಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೋಲಾರದ ಅಂತರಗಂಗೆ ರಸ್ತೆಯ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಛಾಯಾಗ್ರಾಹಕ ದಿವಂಗತ ಜಿ.ಸೋಮಶೇಖರ್ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸೋಮಶೇಖರ್ ಅವರು ಸುದ್ಧಿ ಚಿತ್ರಗಳಿಗೆ ಹಸೆರುವಾಸಿಯಾಗಿದ್ದವರು, ಫೋಟೋದಲ್ಲಿ ಸುದ್ದಿಯನ್ನೆಲ್ಲಾ ಅರ್ಥವತ್ತಾಗಿ ಹೇಳುವ ಶಕ್ತಿ ಸೋಮಶೇಖರ್ ಅವರು ತೆಗೆದ ಫೋಟೊಗಳಿಗೆ ಇರುತ್ತಿತ್ತು ಎಂದರು.
ಅಂದಿನ ಕಾಲಕ್ಕೆ ಪತ್ರಿಕೆ ಮತ್ತು ಪತ್ರಕರ್ತರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಭೆ ಸಮಾರಂಭಗಳಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ವಿಶೇಷ ವಿದ್ಯಮಾನಗಳಿಗೆ ತಕ್ಕ ಹಾಗೆ ಫೋಟೋಗಳನ್ನು ತೆಗೆದುಕೊಡುತ್ತಿದ್ದರು. ಉತ್ತಮ ವ್ಯಕ್ತಿತ್ವ ಹೊಂದಿದ್ದವರು. ಪತ್ರಕರ್ತರು ಕೇಳಿದ ತಕ್ಷಣ ಅವರೇ ಫೋಟೋ ಪ್ರಿಂಟ್ ಹಾಕಿಸಿಕೊಡುತ್ತಿದ್ದರು. ಕೆಲವರು ತಮ್ಮ ಬಳಿ ಇರುವ ಫೋಟೋಗಳನ್ನು ಸಂಗ್ರಹಿಸಿ ಗ್ಯಾಲರಿ ಮಾಡಿದರೆ ನಾನು ಸಹ ನನ್ನ ಬಳಿ ಇರುವ ಫೋಟೋಗಳನ್ನು ಕೊಡುವುದಾಗಿ ತಿಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಕ್ಕೆ ದುಡಿದ ಹಿರಿಯ ಪತ್ರಕರ್ತರನ್ನು ನೆನಪಿಸಿಕೊಳ್ಳುವ ಜವಾಬ್ದಾರಿ ಸಂಘಕ್ಕಿದೆ. ಅವರನ್ನೆಲ್ಲಾ ನೆನೆಯುವ ಮೂಲಕ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಇದರ ಮುಂದುವರೆದ ಭಾಗವಾಗಿ ಸಂಘದ ಆಧಾರಸ್ಥಂಭಗಳಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತರಾದ ಜಿ.ನಾರಾಯಣಸ್ವಾಮಿ, ಕೆ.ಆರ್.ಕೃಷ್ಣಸ್ವಾಮಿ, ಬಿ.ಆರ್ಮುಗಂ, ಬಿ.ವಿ.ನರಸಿಂಹಮೂರ್ತಿ, ಕೆ.ಎಂ.ಮುನಿಯಪ್ಪ, ಕೆ.ಪ್ರಹ್ಲಾದರಾವ್, ಎಂ.ಮಲ್ಲೇಶ್, ಬಿ.ಎನ್.ಗುರುಪ್ರಸಾದ್, ಅವರುಗಳ ಸ್ಮರಣೆಯ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುವ ಮೂಲಕ ಅವರ ಸೇವೆಯನ್ನು ಇಂದಿನ ಪತ್ರಕರ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ವಿವರಿಸಿದರು. ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು ಉಪಸ್ಥಿತರಿದ್ದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಪತ್ರಕರ್ತರು ಹಾಜರಿದ್ದರು.
ಛಾಯಾಚಿತ್ರ ಸ್ವರ್ಧೆ ವಿಜೇತರು-
ಜಿ.ಸೋಮಶೇಖರ್ ನೆನಪಿನಲ್ಲಿ ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ವರ್ಧೆಯನ್ನು ಆಯೋಜಿಸಲಾಗಿತ್ತು.
ಪ್ರಥಮ ಬಹುಮಾನ ಕೆ.ಎನ್.ಚಂದ್ರಶೇಖರ್ ೫೦೦೦ ನಗದು ಮತ್ತು ಪ್ರಶಸ್ತಿಪತ್ರ, ದ್ವಿತೀಯ ಬಹುಮಾನ ದೇವೇಂದ್ರ ಎ ೩೦೦೦ ನಗದು ಮತ್ತು ಪ್ರಶಸ್ತಿಪತ್ರ, ತೃತೀಯ ಬಹುಮಾನ ೨೦೦೦ ನಗದು ಮತ್ತು ಪ್ರಶಸ್ತಿಪತ್ರ ದೊರಕಿತು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಕೋಲಾರ ಜಿಲ್ಲಾ ಛಾಯಾಗ್ರಾಹರಕ ಸಂಘದ ಅಧ್ಯಕ್ಷ ವಿ.ಕೃಷ್ಣ, ತಾಲೂಕು ಅಧ್ಯಕ್ಷ ಸ್ಪಂದನ ರಂಗನಾಥ್ ಉಪಸ್ಥಿತರಿದ್ದರು.