ಬಾಲಕಿಗೆ ಇರಿದ ಪ್ರಕರಣ: ವಿದ್ಯಾರ್ಥಿನಿ ‘ನಡೆ’ ಬಗ್ಗೆ ಅನುಮಾನ..!
ಪುತ್ತೂರು; ಪದವಿಪೂರ್ವ ಕಾಲೇಜಿನ ಪ್ರ.ಪಿಯುಸಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಅದೇ ಕಾಲೇಜಿನ ಹಿಂದೂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ತನಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದು, ವಿದ್ಯಾರ್ಥಿ ಮೇಲೆ ಮಹಿಳಾಠಾಣೆಯಲ್ಲಿ ಫೊಕ್ಸೊ ಪ್ರಕರಣ ದಾಖಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ವಿದ್ಯಾರ್ಥಿನಿಯ ಆರೋಪ ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯೇ ‘ಕಟ್ಟುಕಥೆ’ ಹೆಣೆದಿದ್ದಾಳೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ವಿದ್ಯಾರ್ಥಿನಿಯ ಆರೋಪಕ್ಕೆ ಸಾಕ್ಷ್ಯಾಧಾರ ಸಂಗ್ರಹಿಸುವ ನಿಟ್ಟಿನಲ್ಲಿ ವಿವಿಧ ಕೋನಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದರು. ಕಾನೂನಿನೊಂದಿಗೆ ಸಂಘರ್ಷಕ್ಕೋಳಗಾದ ಬಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಅಲ್ಲದೆ ವಿವಿಧ ಕಡೆಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಆದರೆ ವಿದ್ಯಾರ್ಥಿನಿಯ ಆರೋಪವನ್ನು ಮತ್ತು ಹೇಳಿಕೆಯನ್ನು ಪುಷ್ಠೀಕರಿಸುವ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಕಾರಣ ಬಾಲಕನನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.
ವಿದ್ಯಾರ್ಥಿನಿಯು ಶ್ರೀಧರ್ ಭಟ್ ಅಂಗಡಿಯ ಬಳಿಯಿಂದಾಗಿ ಕಾಲೇಜಿಗೆ ಹೋಗುವ ವೇಳೆ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದರು. ದೂರಿಗೆ ಸಂಬಂಧಿಸಿ ಪೊಲೀಸರು ವಿವಿಧ ಕಡೆಯ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕಾಲೇಜಿನ ಮಕ್ಕಳನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ತನಿಖೆಯ ವೇಳೆ ಸಿಕ್ಕಿರುವ ಮಾಹಿತಿಯಂತೆ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ ಸಮಯದಲ್ಲಿ ಶ್ರೀಧರ್ ಭಟ್ ಅಂಗಡಿ ಎದುರಿನ ರಸ್ತೆ ಮೂಲಕವಾಗಿ ಮೂಲಕವಾಗಿ ಕಾಲೇಜಿಗೆ ಹೋಗಿಲ್ಲ. ಬದಲಾಗಿ ಆಕೆ ಬೊಳುವಾರಿನಿಂದ ಸ್ನೇಹ ಜವುಳಿ ಅಂಗಡಿಯ ಮೂಲಕವಾಗಿ ಕೊಂಬೆಟ್ಟು ರಸ್ತೆಯಲ್ಲಿ ಇಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಜತೆ ಹೋಗಿರುವುದು ದೃಢಪಟ್ಟಿದೆ. ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕ ಪುತ್ತೂರು ಬಸ್‌ನಿಲ್ದಾಣದಿಂದ ನೆಲ್ಲಿಕಟ್ಟೆ ರಸ್ತೆ ಮೂಲಕವಾಗಿ ದೇವಳದ ಎದುರಿನ ರಸ್ತೆ ಮೂಲಕವಾಗಿ ಕಾಲೇಜಿಗೆ ಹೋಗಿರುವುದು ಸ್ಪಷ್ಟಗೊಂಡಿದೆ.
ಇಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರೊಂದಿಗೆ ಸಂತ್ರಸ್ತೆ ವಿದ್ಯಾರ್ಥಿನಿ ಕಾಲೇಜಿನ ವಿಶ್ರಾಂತಿ ಕೊಠಡಿಗೆ ತೆರಳಿ ಬುರ್ಖಾ ತೆಗೆದಿದ್ದಳು. ಆ ಸಮಯದಲ್ಲಿ ಆಕೆಯ ಕೈಯಲ್ಲಿ ಗಾಯವಾಗಲೀ, ರಕ್ತದ ಗುರುತುಗಳಾಗಲೀ ಇರಲಿಲ್ಲ. ಕೈಯ ಭಾಗಕ್ಕೆ ಯಾವುದೋ ಹರಿತವಾದ ಆಯುಧದಿಂದ ತಿವಿದಿರುವುದಾಗಿ ಆರೋಪಿಸಲಾಗಿದ್ದರೂ ಆಕೆ ಧರಿಸಿದ್ದ ಬುರ್ಖಾದಲ್ಲಿ ಹರಿದ ಗುರತು ಇರಲಿಲ್ಲ. ವಿಶ್ರಾಂತಿ ಕೊಠಡಿಯಿಂದ ತರಗತಿ ಕೊಠಡಿಗೆ ಬಂದಿದ್ದ ಬಾಲಕಿ ಮತ್ತೆ ವಾಶ್ ರೂಮ್‌ಗೆ ಹೋಗಿ ಬರುವಾಗ ಆಕೆಯ ಕೈಯಲ್ಲಿ ಗಾಯ ಮತ್ತು ರಕ್ತವಿತ್ತು ಎಂಬ ವಿಚಾರ ಆಕೆಯ ಸ್ನೇಹಿತೆಯರ ವಿಚಾರಣೆಯಿಂದ ತಿಳಿದು ಬಂದಿದೆ ಎಂಬ ಮಾಹಿತಿ ಲಭಿಸಿದೆ.
ಇದೀಗ ಈ ಪ್ರಕರಣದಲ್ಲಿ ಹುಡುಗಿಯ ನಡೆಯ ಬಗ್ಗೆಯೇ ಅನುಮಾನಗಳು ಉಂಟಾಗಿದ್ದು, ಆಕೆ ಸರ್ಕಾರಿ ಆಸ್ಪತ್ರೆಗೆ ಉಪನ್ಯಾಸಕಿಯರ ಜತೆಗೆ ಹೋದ ಸಂದರ್ಭ ವೈದ್ಯರೊಂದಿಗೆ ಗಾಜಿನಿಂದ ಗಾಯವಾಗಿದೆ ಎಂಬ ಹೇಳಿಕೆ ನೀಡಿದ್ದಳು. ಮನೆಗೆ ಹೋದ ನಂತರ ತಾಯಿಯೊಂದಿಗೆ ವಿದ್ಯಾರ್ಥಿಯೊಬ್ಬ ಇರಿದ ಬಗ್ಗೆ ತಿಳಿಸಿದ್ದಳು. ಅಲ್ಲಿಂದ ಇಡೀ ವಾತಾವರಣ ಗೊಂದಲಮಯವಾಗಿ ಬದಲಾಗಿತ್ತು.
ಎಸ್‌ಪಿ ಹೇಳಿಕೆ
ಬುಧವಾರ ಮಧ್ಯಾಹ್ನ ಪುತ್ತೂರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಎನ್ ಭೇಟಿ ನೀಡಿದ್ದು, ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಯುತ್ತಿದೆ. ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ತಿಳಿದುಬರಲಿದೆ. ಅದಕ್ಕೆ ಮೊದಲು ಯಾವುದೇ ಮಾಹಿತಿ ನೀಡುವುದು ಸರಿಯಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.