ಮನುಕುಲಕ್ಕಾಗಿ ಮನ ಮಿಡಿದ ಮಹಾತ್ಮರು ಶರಣಬಸವೇಶ್ವರರು
ಕಲಬುರಗಿ,ಆ.21-ಶರಣಬಸವೇಶ್ವರರು ದಾಸೋಹ ಮೂರ್ತಿಗಳು ಅರಳಗುಂಡಗಿಯಿಂದ ಹಿಡಿದು ಅನೇಕ ಹಳ್ಳಿಗಳಲ್ಲಿ ಸಂಚಾರ ಮಾಡುತ್ತಾ ಕಲಬುರ್ಗಿ ನಗರದ ಬ್ರಹ್ಮಪುರದವರೆಗೂ ದಾಸೋಹ ಮಾಡುತ್ತಾ ಬಂದು ಅರಿವೇ ಗುರು ಎಂಬ ವಾಕ್ಯವನ್ನು ಸಾರಿ ಅರಿತು ಆಚರಿಸಿ ಬೋಧಿಸಿದವರು. ಸದಾವ ಕಾಲ ಗುರುಲಿಂಗ ಜಂಗಮರಿಗಾಗಿ, ಪ್ರಾಣಿ-ಪಕ್ಷಿಗಳಿಗಾಗಿ ಮನುಕುಲಕ್ಕಾಗಿ ಮನ ಮಿಡಿದ ಮಹಾತ್ಮರು ಶರಣಬಸವೇಶ್ವರರು ಎಂದು ವಿಶ್ವ ಹಿಂದೂ ಪರಿಷತ್ ಗೌರವಾಧ್ಯಕ್ಷರಾಗಿರುವ ಲಿಂಗರಾಜಪ್ಪ ಅಪ್ಪಾ ಅವರು ಹೇಳಿದರು.
ನಗರದ ಬಸವೇಶ್ವರ ಕಾಲೊನಿಯ ನೂತನ ಬಡಾವಣೆಯ ಶಿವ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಮಹಾದಾಸೋಹೀ ಕಲಬುರ್ಗಿ ಶರಣಬಸವೇಶ್ವರ ಪುರಾಣದ ಮದುವೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು .ಇತ್ತೀಚಿಗೆ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಲಿಂಗರಾಜ ಅಪ್ಪಾ ದಂಪತಿಗಳಿಗೆ ಶಿವ ಮಂದಿರ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪುರಾಣಿಕರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಸ್ವಾಮೀಜಿ ಅವರು ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಶ್ರೇಷ್ಠವಾದದ್ದು, ಗೃಹಸ್ಥರ ಕೊಡುಗೆ ಈ ಸಮಾಜಕ್ಕೆ ಬಹಳ ದೊಡ್ಡದು ಎಂದು ಪುರಾಣದಲ್ಲಿ ಹೇಳಲಾಗಿದೆ ಎಂದರು. ಕಲಾವಿದರಾದ ಚೇತನ ಸ್ವಾಮಿ ಬೀದಿಮನಿ, ತಬಲಾ ವಾದಕರಾದ ಕಲ್ಮೇಶ ದೇಸಾಯಿ ಕಲ್ಲೂರ ಅವರಿಂದ ಸಂಗೀತ ಜರುಗಿತು. ಶಿವ ಮಂದಿರ ಸಮಿತಿ ಅಧ್ಯಕ್ಷ ಭಿಮಾಶಂಕರ ಚಕ್ಕಿ, ಉಪಾಧ್ಯಕ್ಷರಾದ ಮಲ್ಲಿನಾಥ ಭೋಳಶೆಟ್ಟಿ, ವಚನೋತ್ಸವ ಮಹಿಳಾ ಘಟಕದ ಸರ್ವ ಪದಾಧಿಕಾರಿಗಳು, ಶಿವ ಮಂದಿರ ಸಮಿತಿ ಸದಸ್ಯರು, ಕಾಲೊನಿಯ ಸಮಸ್ತ ಸದ್ಭಕ್ತರು ಶರಣಬಸವೇಶ್ವರ ಮದುವೆಯನ್ನು ಬಹಳ ಶಾಸ್ತ್ರೋತ್ತವಾಗಿ ವಿಜೃಂಭಣೆಯಿಂದ ನೆರವೇರಿಸಿದರು. ಭಕ್ತರಿಗೆಲ್ಲ ವಿಶೇಷವಾಗಿ ಹೋಳಿಗೆಯ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಕೀಲರಾದ ಸುರೇಶ ಟೆಂಗಳಿಯವರು ಈ ಪ್ರಾಸಾದ ಸೇವೆ ಮಾಡಿದರು.