ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲು ತಪ್ಪಿಸಲು ‘ಡಿಜಿಟಲ್ ನೋಂದಣಿ’ ಎಂಬ ಹೊಸ ವಿಧಾನ
ಪುತ್ತೂರು: ಆರೋಗ್ಯ ಕಾಪಾಡಿಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಬರುವ ಮಂದಿ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಪುತ್ತೂರು ಉಪವಿಭಾಗದಲ್ಲಿ ‘ಡಿಜಿಟಲ್ ನೋಂದಣಿ’ ಎಂಬ ಹೊಸ ವಿಧಾನವನ್ನು ಜಾರಿಗೊಳಿಸಲಾಗಿದೆ. ಈ ಹೊಸ ವಿಧಾನದ ಮೂಲಕ ತಾವೇ ಆಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳುವ ವಿಶಿಷ್ಠ ವ್ಯವಸ್ಥೆಗೆ ‘ಸ್ಕ್ಯಾನ್ ಆಂಡ್ ಶೇರ್ ಎಂದು ಹೆಸರಲಾಗಿದೆ. ಪುತ್ತೂರು ಉಪವಿಭಾಗದಲ್ಲಿ ಇದು ಮೊದಲ ಪ್ರಯೋಗವಾಗಿದೆ.
ದಿನವೊಂದಕ್ಕೆ ಸರಾಸರಿ ೭೦೦ ರೋಗಿಗಳು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ನಾಲ್ಕು ಕಡೆ ಡಿಜಿಟಲ್ ನೋಂದಣಿಯ ಫಲಕ ಅಳವಡಿಸಲಾಗಿದೆ. ಜನ ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಇಲ್ಲಿ ಸ್ಕ್ಯಾನ್ ಮಾಡಿಕೊಂಡು ತಮ್ಮ ಸರತಿಯ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ. ತಮ್ಮ ಸರದಿ ಬರುವವರೆಗೆ ಆರಾಮವಾಗಿ ಕುಳಿತುಕೊಂಡು ಕಾಯಬಹುದಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಪುತ್ತೂರಾಯ ತಿಳಿಸಿದ್ದಾರೆ.
ಎ.ಸಿ. ಪರಿಶೀಲನೆ
ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಬುಧವಾರ ಸರ್ಕಾರಿ ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಕ್ಯಾನ್ ಆಂಡ್ ಶೇರ್ ವ್ಯವಸ್ಥೆಯನ್ನು ಸ್ವತಃ ತಾವೇ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪರೀಕ್ಷಿಸಿದರು. ಇದೊಂದು ಉತ್ತಮ ಆಯ್ಕೆ. ಡಿಜಿಟಲ್ ಮಾಧ್ಯಮ ಬಳಸಿಕೊಂಡು ಜನರ ಸರತಿ ಸಾಲು ತಪ್ಪಿಸಲು ಸರ್ಕಾರದ ಸೂಚನೆಯಂತೆ ಈ ವ್ಯವಸ್ಥೆ ಅಳವಡಿಸಿರುವುದು ಉತ್ತಮ ವಿಚಾರವಾಗಿದೆ ಎಂದರು.
ಅಭಾ ಕಾರ್ಡ್ ಐಡಿ ಪಡೆಯಬಹುದು
ಸ್ಕ್ಯಾನ್ ಮಾಡುವಾಗ ಮೊಬೈಲ್ ನಂಬರ್ ಬದಲು ಆಧಾರ್ ನಂಬರ್ ಮೂಲಕ ಲಾಗಿನ್ ಆದರಲ್ಲಿ ನಿರ್ದಿಷ್ಟ ಆಪ್‌ಗೆ ಪ್ರವೇಶ ಪಡೆಯಲು ಸಾಧ್ಯ. ಇಲ್ಲಿ ಆಧಾರ್ ಸಹಕಾರದಿಂದ ನಮ್ಮ ಪೂರ್ತಿ ವಿಳಾಸ ಮತ್ತಿತರ ಮಾಹಿತಿ ಆಸ್ಪತ್ರೆಯ ಕಂಪ್ಯೂಟರ್‌ನಲ್ಲಿ ಕಾಣಿಸುತ್ತದೆ. ಅದನ್ನು ನೇರ ಪ್ರಿಂಟ್ ತೆಗೆಯುವ ಮೂಲಕ ಮಾಹಿತಿಗಳನ್ನು ಬರೆಯುತ್ತಾ ಸಮಯ ಕಳೆಯುವ ಅನಿವಾರ್ಯತೆ ತಪ್ಪಿಸಬಹುದು. ಆಧಾರ್ ಲಿಂಕ್ ಮೂಲಕ ಅಭಾ ಕಾರ್ಡ್ (ಆಯುಷ್ಮಾನ್ ಭಾರತ್ ಹೆಲ್ತ್ ಎಕೌಂಟ್) ಐಡಿ ನಂಬರ್ ಪಡೆದುಕೊಳ್ಳಬಹುದು. ಈ ಚಾರ್ಟ್‌ನಲ್ಲಿ ರೋಗಿಗೆ ನೀಡಲಾದ ಔಷಧಿಯ ವಿವರಗಳನ್ನು ದಾಖಲಿಸಿದರೆ ಮುಂದೆ ದೇಶದ ಯಾವುದೇ ಮೂಲೆಯಲ್ಲಿ ಐಡಿ ಮೂಲಕ ವೈದ್ಯಕೀಯ ಚಿಕಿತ್ಸೆಯ ಕೇಸ್ ಹಿಸ್ಟರಿ ಪಡೆದುಕೊಳ್ಳಲು ಸಾಧ್ಯವಿದೆ. ಪ್ರತೀ ರೋಗಿಯ ಡಿಜಿಟಲ್ ಸಪರೇಟ್ ಫೈಲ್ ಇದ್ದಾಗ ಯಾವ ವೈದ್ಯರಿಗೂ ಚಿಕಿತ್ಸೆ ನಡೆಸಲು ಸುಲಭವಾಗುತ್ತದೆ. ಇದು ಪ್ರಾಯೋಗಿಕ ಹಂತದಲ್ಲಿದೆ ಎಂದು ಡಾ.ಆಶಾ ಪುತ್ತೂರಾಯ ಹೇಳಿದರು.