ಸುಂದರ ಬದುಕಿಗೆ ಸ್ಕೌಟ್ಸ್-ಗೈಡ್ಸ್ ಸಹಕಾರಿ: ಮಂಜುಳಾ
ಇAಡಿ:ಆ.೨೨: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತೆ(ಗೈಡ್ಸ್) ಮಂಜುಳಾ ಹೇಳಿದರು.
ಅವರು ಪಟ್ಟಣದ ಗುರುಭವನದಲ್ಲಿ ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಜರುಗಿದ ಸ್ಕೌಟ್ಸ್-ಗೈಡ್ಸ್ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೆ?ರಿಸುವ ಕಾರ್ಯಕ್ರಮ ತಾಲೂಕಿನಲ್ಲಿ ಹೆಚ್ಚಾಗಿ ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಹಾಗಾಗಿ ಎಲ್ಲಾ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ಗೆ ಸೇರ್ಪಡೆಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಸ್ಕೌಟ್ಸ್-ಗೈಡ್ಸ್ ರಾಜ್ಯ ಪರಿಷತ್ತಿನ ಪ್ರತಿನಿಧಿ ಎಸ್ ಎಸ್ ಬೊಮ್ಮನಳ್ಳಿ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸ್ನಿಂದಾಗಬೇಕು. ಮನುಷ್ಯನಿಗೆ ಸಂತೋಷ ಮತ್ತು ಆನಂದ ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ಸಿಗಲು ಸಾಧ್ಯ ಎಂದರು.
ತಾಲೂಕ ಕಾರ್ಯದರ್ಶಿ ಶಹಾಜಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಮಕ್ಕಳಲ್ಲಿ ತುಂಬಬೇಕು ಎಂದು ಹೇಳಿದರು.
ಜಿಲ್ಲಾ ಸ್ವಯಂ ಸೇವಕ ರಾಜಶೇಖರ ಖೇಡಗಿ, ಖಜಾಂಚಿ ಬಸವರಾಜ ಗೋರನಾಳ, ಹಿರಿಯ ಸ್ಕೌಟ್ ಪ್ರತಿನಿಧಿ ವೈ ಜಿ ಬಿರಾದಾರ, ಸ್ಕೌಟ್ಸ್-ಗೈಡ್ಸ್ ಮಾಧ್ಯಮ ಪ್ರತಿನಿಧಿ ಸಂತೋಷ ಬಂಡೆ, ಸ್ಕೌಟ್ ಮಾಸ್ಟರ್ ಶಂಕರ ಕೋಳೆಕರ, ವೈ ಎಂ ಬಾಗೇವಾಡಿ, ಸಿ ಡಿ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.