ಡಿಸಿಎಂ ಡಿಕೆಶಿ ವಿತರಿಸಿದ ಸ್ಕೂಟರ್ ಸ್ಫೋಟ !ವಿಕಲಾಂಗರ ಸ್ಕೂಟರ್‍ಗಳ ಕ್ವಾಲಿಟಿ ಆಡಿಟ್‍ಗೆ ಹೆಚ್ಚಿದ ಒತ್ತಡ
-ಮಹೇಶ್ ಕುಲಕರ್ಣಿ
ಕಲಬುರಗಿ,ಆ.21-ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ 180 ವಿಕಲಚೇತನ ಫಲಾನುಭವಿಗಳಿಗೆ ತಲಾ ಒಂದು ದ್ವಿಚಕ್ರ ವಾಹನ ವಿತರಿಸಿದ ಕೆಲವೇ ಗಂಟೆಗಳಲ್ಲಿ ಫಲಾನುಭವಿಯೊಬ್ಬರ ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು, ರಸ್ತೆ ಪಕ್ಕದ ಮೈಲುಗಲ್ಲಿಗೆ ಅಪ್ಪಳಿಸಿ ಅಪಘಾತಕ್ಕೆ ಈಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸೇಡಂ ಪಟ್ಟಣದಿಂದ ಸುಮಾರು ಎಂಟು ಕಿ.ಮೀ ಅಂತರದ ಸೇಡಂ-ರಿಬ್ಬನ್‍ಪಲ್ಲಿ-ಹೈದರಾಬಾದ್ ರಾಜ್ಯ ಹೆದ್ದಾರಿ ಪಕ್ಕದ ಹೂಡಾ ಸಮೀಪದ ಜವಾಹರ ನಗರದ ಬಳಿ ಈ ಘಟನೆ ಮಂಗಳವಾರ ಸಂಜೆ ಸಂಭವಿಸಿದ್ದು, ದ್ವಿಚಕ್ರ ವಾಹನದ ಫಲಾನುಭವಿ ಅನ್ನಿಬಾಯಿ ಮೇಘುನಾಯಕ್ ಹಾಗೂ ಆಕೆಯ ಸಹೋದರ ಪಾಟೀಲ್ ಮಂಗೆನಾಯಕ್ ಗಾಯಗೊಂಡಿದ್ದಾರೆ. ಇವರಿಬ್ಬರೂ ಸೇಡಂ ತಾಲೂಕಿನ ಸೀತ್ಯಾ ನಾಯಕ ತಾಂಡಾ ನಿವಾಸಿಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಸೇಡಂ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು, ಘಟನೆಯಿಂದಾಗಿ ಪಾಟೀಲ್ ಮಂಗೆ ನಾಯಕ್ ಅವರ ಪಕ್ಕೆಲುಬಿನ ಮೂಳೆ ಮುರಿದಿದ್ದರೆ, ಅನ್ನಿಬಾಯಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಣಮಟ್ಟ ಸಂಶಯಾಸ್ಪದ:
ಮಂಗಳವಾರ ಕಲಬುರಗಿ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಫೆಲೋಶಿಪ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ 180 ಅರ್ಹ ವಿಕಲಚೇತನ ಫಲಾನುಭವಿಗಳಿಗೆ ತಲಾ ಒಂದು ಸ್ಕೂಟರ್ ವಿತರಿಸಿದ್ದರು. ಜಿಲ್ಲಾ ಅಂಗವಿಕಲ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿತರಿಸಲಾಗಿದ್ದ ಈ ಸ್ಕೂಟರ್‍ಗಳನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಖರೀದಿಸಲಾಗಿತ್ತು. ಹೀಗೆ ಖರೀದಿಸಿದ ಸ್ಕೂಟರ್‍ಗಳನ್ನು ಲೋಕಸಭಾ ಚುನಾವಣಾ ನೀತಿಸಂಹಿತೆ ನೆಪದಲ್ಲಿ ವಿತರಿಸದೆ ಹಾಗೆಯೇ ಬಯಲಿನಲ್ಲಿ ಇಡಲಾಗಿತ್ತು. ಈ ಮಧ್ಯೆ, ಬೇಸಿಗೆಯ ರಣಬಿಸಿಲಿನಲ್ಲಿ ನಿಂತಿದ್ದ ಈ ಸ್ಕೂಟರ್‍ಗಳು ಕಳೆದ ಎರಡ್ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯಲ್ಲಿ ತೊಯ್ದು ಅದಾಗಲೇ ಕಿಲುಬುಗಟ್ಟಿದ್ದವು ಎಂದು ಫಲಾನುಭವಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ. ಹೀಗೆ ಸ್ಕೂಟರ್‍ಗಳ ಗುಣಮಟ್ಟ ಕುಸಿದಿರುವ ಬೆನ್ನಲ್ಲೇ ಅವುಗಳನ್ನು ಫಲಾನುಭವಿಗಳಿಗೆ ಯಥಾವತ್ತಾಗಿ ವಿತರಿಸಲಾಗಿದೆ. ಈ ಮಧ್ಯೆ, ಫಲಾನುಭವಿಗಳ ಆಯ್ಕೆಯಲ್ಲೂ ತಾರತಮ್ಯ ನೀತಿ ಅನುಸರಿಸಲಾಗಿದ್ದು, ಅದಾಗಲೇ ಒಮ್ಮೆ ದ್ವಿಚಕ್ರ ವಾಹನ ಪಡೆದಿರುವ ಸುಮಾರು 20 ಫಲಾನುಭವಿಗಳಿಗೆ ಪುನಃ ಸ್ಕೂಟರ್ ವಿತರಿಸಲಾಗಿದೆ. ಇದು ಆಯ್ಕೆ ನಿಯಮಕ್ಕೆ ವಿರುದ್ಧವಾದ ನಿರ್ಧಾರ ಎಂದು ನವ ಕರ್ನಾಟಕ ಎಂಆರ್‍ಡಬ್ಲ್ಯು, ವಿಆರ್‍ಡಬ್ಲ್ಯು ಹಾಗೂ ಯುಆರ್‍ಡಬ್ಲ್ಯು ಕಾರ್ಯಕರ್ತರ ಸಂಘದ ರಾಜ್ಯಾಧ್ಯಕ್ಷ ಅಂಬಾಜಿ ಪಿ.ಮೇಟಿ ಟೀಕಿಸುತ್ತಾರೆ.
ಸ್ಕೂಟರ್‍ಗಳ ಗುಣಮಟ್ಟ ಪರಿಶೀಲಿಸದೆ ಹಾಗೆಯೇ ವಿತರಿಸಿದ ಕಾರಣಕ್ಕಾಗಿ ಇಂತಹ ಅಪಘಾತ ಸಂಭವಿಸಿದ್ದು, ಮುಂದೆಯೂ ಇಂತಹ ಅಪಘಾತಗಳನ್ನು ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ, ಈ ನಿಟ್ಟಿನಲ್ಲಿ ಸಮಗ್ರ ತನಿಖೆ ಕೈಗೊಂಡು ಈಗಾಗಲೇ ಸ್ಕೂಟರ್‍ಗಳನ್ನು ಪಡೆದಿರುವ ಫಲಾನುಭವಿಗಳ ಹಿತ ಕಾಪಾಡಬೇಕೆಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಕಲಚೇತನ ವ್ಯಕ್ತಿಯೊಬ್ಬರು ಒತ್ತಾಯಿಸುತ್ತಾರೆ.
ವಿಕಲಾಂಗರಿಗೆ ಮಂಗಳವಾರ ವಿತರಿಸಿರುವ ಸ್ಕೂಟರ್‍ಗಳು ಬಿಸಿಲು ಮತ್ತು
ಮಳೆಯಲ್ಲಿ ನಿರಂತರ ತೊಯ್ದು ಹಾಳಾಗಿವೆ. ಹಾಗಾಗಿ, ಫಲಾನುಭವಿಯೊಬ್ಬರ
ಸ್ಕೂಟರಿನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ವಿತರಿಸಲಾಗಿರುವ ಎಲ್ಲ
ಸ್ಕೂಟರ್‍ಗಳ ಕ್ವಾಲಿಟಿ ಆಡಿಟ್ ನಡೆಸಬೇಕು.
ಫಲಾನುಭವಿಗೆ ಪರಿಹಾರಕ್ಕೆ ಕ್ರಮ
ಸೇಡಂ ತಾಲೂಕಿನ ಜವಾಹರ ನಗರ ಬಳಿ ವಿಕಲಾಂಗ ಫಲಾನುಭವಿಯೊಬ್ಬರ
ನೂತನ ಸ್ಕೂಟರ್ ಸ್ಫೋಟಗೊಂಡಿರುವ ಪ್ರಕರಣ ತಮ್ಮ ಗಮನಕ್ಕೂ ಬಂದಿದ್ದು, ಈ
ಕುರಿತು ಸ್ಕೂಟರ್ ಕಂಪನಿಗೆ ಮಾಹಿತಿ ನೀಡಲಾಗಿದೆ. ಘಟನೆ ಕುರಿತಂತೆ ಫಲಾನುಭವಿಗೆ
ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ
ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಸ್ಪಷ್ಟನೆ
ನೀಡಿದರು.
ಕಳೆದ ನಾಲ್ಕೈದು ತಿಂಗಳ ಹಿಂದೆ ಸ್ಕೂಟರ್‍ಗಳನ್ನು ಇಲಾಖೆಯ ನಿರ್ದೇಶಕರ
ಕಚೇರಿಯಿಂದಲೇ ಟೆಂಡರ್ ಮೂಲಕ ಒದಗಿಸಲಾಗಿದೆ. ಮಂಗಳವಾರ ವಿತರಣೆ
ಮಾಡಲಾಗಿರುವ ಎಲ್ಲ 180 ಸ್ಕೂಟರ್‍ಗಳ ಕ್ವಾಲಿಟಿ ಆಡಿಟ್ ಕೈಗೊಳ್ಳುವ ನಿಟ್ಟಿನಲ್ಲಿ
ನಿರ್ದೇಶಕರೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.