ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಮಗನಿಗೆ 30 ವರ್ಷ, ತಂದೆಗೆ 5 ವರ್ಷ ಜೈಲು ಶಿಕ್ಷೆ
ಕಲಬುರಗಿ,ಆ.21-ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾಗಿರುವುದರಿಂದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು ಅಪರಾಧಿಯಾದ ಮಗನಿಗೆ 30 ವರ್ಷ ಹಾಗೂ ಆತನ ತಂದೆಗೆ 5 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.
ಚಿತ್ತಾಪುರ ತಾಲ್ಲೂಕಿನ ಸತೀಶ್ ಕಾಶಿ ಸೂರ್ಯಕಾಂತ (21) ಹಾಗೂ ಸೂರ್ಯಕಾಂತ ಕಾಶಿ (45) ಶಿಕ್ಷೆಗೆ ಒಳಗಾದವರು.
ಬಾಲಕಿಯನ್ನು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದ ಸತೀಶ್, 2022ರ ಮೇ. 5 ರಂದು ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಬಾಲಕಿಯ ಕುಟುಂಬಸ್ಥರು ದೂರು ಕೊಡಲು ಮುಂದಾದರು. 18 ವರ್ಷ ತುಂಬಿದ ಬಳಿಕ ಮದುವೆ ಆಗುವುದಾಗಿ ಹೇಳಿದ ಅಪರಾಧಿ, ಬಾಲಕಿಯನ್ನು ತನ್ನ ಮನೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿಕೊಂಡು ಆಗಾಗ ಅತ್ಯಾಚಾರವೂ ಎಸಗಿದ್ದ. ಸತೀಶ್ ಕುಟುಂಬಸ್ಥರು ಬಾಲಕಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರು. ಜತೆಗೆ ಸತೀಶ್ ತಂದೆ ಸೂರ್ಯಕಾಂತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟು, ಜೀವ ಬೆದರಿಕೆಯೂ ಹಾಕಿದ್ದ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಪಿಐಗಳಾದ ಶಿವಾನಂದ ಎನ್.ಅಂಬಿಗೇರ ಹಾಗೂ ಪ್ರಕಾಶ್ ಆರ್.ಯಾತನೂರ್ ಅವರು ತನಿಖೆ ನಡೆಸಿದ್ದರು. ವಿವಿಧ ಕಾಯ್ದೆಗಳ ಅಡಿಯಲಕ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ವಿಶೇಷ ಪೋಕ್ಸೊ) ಎಫ್‍ಟಿಎಸ್‍ಸಿ-1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಸತೀಶ್‍ಗೆ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿ 30 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ಹಾಗೂ ಸೂರ್ಯಕಾಂತಗೆ 5 ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದರು. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 7 ಲಕ್ಷ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.