ನಾರಾಯಣ ಗುರುಗಳು ಕೇರಳದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದರು:ಸಚಿವ ರಹೀಂಖಾನ್
ಬೀದರ, ಆ.21:ನಾರಾಯಣ ಗುರುಗಳು ಸಾಮಾಜಿಕ ಸಮಾನತೆಗಾಗಿ ಅಂದು ಕೇರಳದಲ್ಲಿ ದೊಡ್ಡ ಕ್ರಾಂತಿಯನ್ನೆ ಮಾಡಿದ್ದರು ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ. ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಾರಾಯಣಗುರು ಸೇರಿದಂತೆ ಹಲವಾರು ಮಹಾತ್ಮರ ಜಯಂತಿಗಳನ್ನು ಎಲ್ಲಾ ಸಮುದಾಯದವರು ಸೇರಿ ಆಚರಿಸಬೇಕು ಮತ್ತು ಅವರ ತತ್ವ. ಸಿದ್ದಾಂತಗಳು ಎಲ್ಲಾ ಸಮುದಾಯಗಳ ಒಳಿತನ್ನೆ ಬಯಸುತ್ತವೆ ಅವರು ದೇವರು ಒಬ್ಬನೇ ಎಂದು ಸಾರಿದ್ದರು. ನಮ್ಮೆಲ್ಲರ ದೇವರು ಒಬ್ಬನೆ ಆಗಿದ್ದಾನೆ ಎಂದು ಹೇಳಿದರು.
ರಾಜ್ಯಾದ್ಯಂತ ನಾರಾಯಣಗುರು ಹಾಗೂ ಡಿ. ದೇವರಾಜ ಅರಸು ಅವರ ಜಯಂತಿ ಆಚರಣೆ ಮಾಡುತ್ತಿದ್ದು, ಎಲ್ಲರಿಗೂ ಈ ಜಯಂತಿ ಶುಭಾಶಯಗಳು. ನಾವು ಉಸಿರಾಡುವ ಗಾಳಿ. ಇರುವ ಭೂಮಿ ಒಂದೇ ಇದೆ ಅವು ಎಂದಿಗೂ ಭೇದಭಾವ ಮಾಡಿಲ್ಲ. ಪ್ರಾಣಿಪಕ್ಷಿಗಳು ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದರು.
ಕಲಬುರಗಿ ಆಕಾಶವಾಣಿ ಕೇಂದ್ರದ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ಅತಿಥಿ ಉಪನ್ಯಾಸಕರಾಗಿ ಮಾತನಾಡಿ ನಾರಾಯಣಗುರುಗಳ 170 ನೇ ಜಯಂತಿ ಆಚರಣೆ ಮಾಡುತ್ತಿರುವುದು ಪವಿತ್ರ ದಿನ ಇದಾಗಿದೆ. ಕೇರಳದಲ್ಲಿ 19 ನೇ ಶತಮಾನದಲ್ಲಿ ದಲಿತರು. ಅಸ್ಪ್ಯಶರು ಹಾಗೂ ಶೋಷಿತ ಜನರಿಗೆ ದೇವಸ್ಥಾನಗಳಲ್ಲಿ ಅಂದಿನ ದಿನಮಾನಗಳಲ್ಲಿ ಪ್ರವೇಶ ಇರಲಿಲ್ಲ.
ಕೆಳವರ್ಗದ ಜನರು ಮಧ್ಯಾಹ್ನದ ಸಮಯದಲ್ಲಿ ಮಾತ್ರ ತಿರುಗಾಡಬೇಕಿತ್ತು. ರಸ್ತೆಯಲ್ಲಿ ತಿರುಗಾಡುವಾಗ ಕೆಳವರ್ಗದ ಜನರು ಎಲ್ಲೂ ಉಗುಳುವ ಹಾಗೆ ಇರಲ್ಲಿಲ್ಲ ಹಾಗಾಗಿ ಅವರು ಕೊರಳಿಗೆ ಮಡಿಕೆ ಕಟ್ಟಿಕೊಂಡು ತಿರುಗಾಡಬೇಕಿತ್ತು. ಕೆಳವರ್ಗದ ಮಹಿಳೆಯರು ಸ್ಥನ ತೆರಿಗೆ ಕಟ್ಟುವ ಅನಿಷ್ಟ ಪದ್ದತಿಯೂ ಅಂದಿನ ದಿನಗಳಲ್ಲಿ ಇತ್ತು. ಇಂತಹ ಹಲವಾರು ಅನಿಷ್ಟ ಪದ್ದತಿಗಳ ನಿರ್ಮೂಲನೆಗೆ ನಾರಾಯಣ ಗುರುಗಳು ಕೇರಳದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದರು ಎಂದರು.
ಅವರು ಶೋಷಿತ ವರ್ಗಗಳ ಧ್ವನಿಯಾಗಿ ಕೆಲಸ ಮಾಡಿ ಮಾನವರೆಲ್ಲರೂ ಒಂದೇ ಜಾತಿ ಎಂದು ಸಾರಿದರು. ದೇವರು ಒಬ್ಬನೇ ಆಗಿದ್ದಾನೆ ಎಂದ ಅವರು ಹಲವಾರು ದೇವಾಲಯಗಳನ್ನು ನಿರ್ಮಿಸಿ ದೇವಾಲಯಗಳಲ್ಲಿ ಗಂಟೆಗಳು ಮೊಳಗಿದರೆ ಸಾಲದು ಶಾಲೆಗಳಲ್ಲಿ ಗಂಟೆಗಳ ಶಬ್ದ ಕೇಳಬೇಕು ಎಂದು ದೇವಾಲಯಗಳ ಪಕ್ಕ ಶಾಲೆಗಳನ್ನು ಸ್ಥಾಪಿಸಿ ಶೋಷಿತ ಜನರಿಗೆ ಶಿಕ್ಷಣ ನೀಡಿದರು. ತಿರುವಾಂಕುರಿನ ರಾಜನ ಆಡಳಿತ ಮತ್ತು ಅಂದಿನ ಸರಕಾರಿ ಶಾಲೆಗಳಲ್ಲಿ ಅಸ್ಪøಶ್ಯರು ಶಿಕ್ಷಣ ಪಡೆಯುವ ಹಾಗೆ ಇರಲಿಲ್ಲ ಎಂದು ಹೇಳಿದರು.
ಮನುಷ್ಯ ಜಾತಿ ಒಂದೇ. ದೇವರು ಒಬ್ಬನೇ ಎಂದು ಹೇಳುವ ಮೂಲಕ ವೈಚಾರಿಕ ಕ್ರಾಂತಿಯನ್ನೆ ಮಾಡಿದ ನಾರಾಯಣಗುರುಗಳು 1924 ರಲ್ಲಿ ಸರ್ವಧರ್ಮ ಸಮ್ಮೇಳನವನ್ನು ನಡೆಸಿದ್ದರು. ನಾರಾಯಣ ಗುರುಗಳ ಪವಿತ್ರ ಸ್ಥಳ ಶಿವಗಿರಿಯಾಗಿದೆ. ಅವರು ಪವಾಡ ಮಾಡದೇ ಪರಿಶ್ರಮದಿಂದ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ್ದರು ಅವರ ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿಯವರು ಹಾಗೂ ಬೀದರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚಿಮಕೋಡೆ ಅವರು ಮಾತನಾಡಿದರು.
ಕಾರ್ಯಕ್ರಮಕ್ಕು ಮುನ್ನ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಹಾಗೂ ಡಿ. ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬೀದರ ನಗರಸಭೆ ಅಧ್ಯಕ್ಷರಾದ ಮೊಹ್ಮದ ಗೌಸ್, ಬೀದರ ತಹಶಿಲ್ದಾರ ಮಹ್ಮದ್ ಜಿಯಾವುದ್ದಿನ್, ಇಡಿಗ ಸಮಾಜದ ಜಿಲ್ಲಾಧ್ಯಕ್ಷರಾದ ಡಾ. ರಾಜಶೇಖರ ಸೇಡಂಕರ್, ಕಾರ್ಯದರ್ಶಿ ಶುಭಾಷ ಚೌದ್ರಿ, ಇಡಿಗ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಸಂಗಯ್ಯ ಸುಲ್ತಾನಪುರ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಬಸವರಾಜ ಮಾಳಗೆ, ಜಾನಪದ ಅಕಾಡೆಮಿ ಸದಸ್ಯರಾದ ವಿಜಯಕುಮಾರ್ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ನಾರಾಯಣಗುರು ಸಮಾಜದ ಕುಲ ಭಾಂಧವರು ಸೇರಿದಂತೆ ಇತರೆ ಹಲವಾರು ಜನರು ಭಾಗವಹಿಸಿದ್ದರು.