ದೇವರಾಜ ಅರಸರು ಶೋಷಿತ ಜನರ ಏಳಿಗೆಗಾಗಿ ಶ್ರಮಿಸಿದ್ದರು:ಸಚಿವ ರಹೀಂಖಾನ್
ಬೀದರ: ಆ.21: ಕೆಳವರ್ಗದ ಶೋಷಿತ ಜನರ ಏಳಿಗೆಗಾಗಿ ಸಾಮಾಜಿಕ ಕ್ರಾಂತಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಶ್ರಮಿಸಿದ್ದರು ಎಂದು ಪೌರಡಾಳಿತ ಹಾಗೂ ಹಜ್ ಸಚಿವರಾದ ರಹೀಂಖಾನ್ ತಿಳಿಸಿದರು.
ಅವರು ಮಂಗಳವಾರ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೀದರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗದ ಸಣ್ಣ- ಸಣ್ಣ ಜಾತಿಗಳನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಅರ್ಥಿಕವಾಗಿ ಮುಂದೆ ಬರಲು ಅವರ ಕೊಡುಗೆ ಬಹಳಷ್ಟು ಇದೆ. ಹಲವಾರು ವಸತಿ ನಿಲಯಗಳು ಹಾಗೂ ಶಾಲೆಗಳನ್ನು ತೆರೆದು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಿದರು. ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮ್ಮಕೊಡೆ ಅವರು ಮಾತನಾಡಿ ಪ್ರಗತಿಪರ ಸಾಧನೆಗಳ ಸರದಾರ ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾದ ಮೊದಲ ಬಾರಿಗೆ ಮಲ ಹೋರುವ ಪದ್ಧತಿಯನ್ನು ತೆಗೆದು ಹಾಕಿದರು. ಬಡವರು ನಿರ್ಗತಿಕರಿಗೆ ವಸತಿ ಯೋಜನೆ ಸೇರಿದಂತೆ ಇನ್ನೂ ಹಲವು ಯೋಜನೆಗಳನ್ನು ಕಾರ್ಯಗತಕ್ಕೆ ತಂದರು.
ಜೀತ ಪದ್ಧತಿ ನಿರ್ಮೂಲನೆ ಮಾಡಿ, ಜಮೀನುಗಳಲ್ಲಿ ದುಡಿಯುವಂತಹ ನಿರ್ಗತಿಕರಿಗೆ ಜಮಿನು ನೀಡಿ ಅವರಿಗೆ ಮುಖ್ಯ ವಾಹಿನಿಗೆ ತರುವ ಪ್ರಮಾಣಿಕ ಕೆಲಸವನ್ನು ದೇವರಾಜ ಅರಸರು ಮಾಡಿದ್ದರು ಎಂದು ಹೇಳಿದರು.
ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರದ ಸಹ ಪ್ರಾಧ್ಯಪಾಕರಾದ ಡಾ. ಸುಚಿತಾನಂದ ಕೆ. ಮಲ್ಕಾಪೂರೆ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿಗಳಾದ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿಗಳಾದ ಜಗನ್ನಾಥ ಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಸಂಗೀತಾ ಬಿರದಾರ ಸೇರಿದಂತೆ ಹಿಂದುಳಿದ ವರ್ಗಗಳ ವಸತಿ ನಿಲಯದ ವಿಧ್ಯಾರ್ಥಿಗಳು, ಶಿಕ್ಷಕರು, ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.