ಡಿ.ದೇವರಾಜ ಅರಸು ಅವರ 109 ನೇ ಜನ್ಮ ದಿನಾಚರಣೆ
ಬಸವನಬಾಗೇವಾಡಿ, ಆ. 21:ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದು ಸ್ಮರಣೀಯ ಕಾರ್ಯ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಗಂಗಾಧರ ಲೇಔಟ್‍ನಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 109 ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ದೇವರಾಜ ಅರಸು ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಭೂಸುಧಾರಣೆ ಕಾನೂನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಉಳುವನೇ ಭೂಮಿಯ ಒಡೆಯನನ್ನಾಗಿ ಮಾಡಿದರು. ಎಲ್ಲರಿಗೂ ಸಮಾನ ಹಕ್ಕು ದೊರೆಯುವಂತೆ ಮಾಡಿದರು ಹೇಳಿದರು.
ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದಾರೆ. ಹಿಂದುಳಿದ ವರ್ಗಗಳ ಏಳ್ಗೆಗಾಗಿ ಮುಖ್ಯಮಂತ್ರಿಗಳಿದ್ದಾಗ ರಾಜ್ಯದಲ್ಲಿ ಕ್ರಾಂತಿಕಾರ ಹೆಜ್ಜೆಯಿಟ್ಟ ಧೀಮಂತ ನಾಯಕರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಕನ್ನಡ ನಾಡು ಕಂಡು ಧೀಮಂತ ನಾಯಕರಲ್ಲಿ ಡಿ.ದೇವರಾಜ ಅರಸು ಒಬ್ಬರಾಗಿದ್ದಾರೆ. ಇವರು ಮುಖ್ಯಮಂತ್ರಿಗಳಿದ್ದಾಗ ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣವಾಗಿರುವದು ಹೆಮ್ಮೆ ಸಂಗತಿ. ಇವರು ಎಲ್ಲ ವರ್ಗದವರು ಗೌರವಯುತವಾಗಿ, ಸಮಾನವಾಗಿ ಬದುಕಬೇಕೆಂದು ಆಶಯ ಹೊಂದಿದ್ದರು ಎಂದರು.
ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕಿ ವಿಜಯಲಕ್ಷ್ಮೀ ಅವರು ಡಿ.ದೇವರಾಜ ಅರಸು ಅವರ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಡಿಎಸ್‍ಎಸ್ ಮುಖಂಡ ಅಶೋಕ ಚಲವಾದಿ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ರಿವಾಳ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿದರು .
. ಕಾರ್ಯಕ್ರಮದಲ್ಲಿ ಹಿಂದುಳಿ ವರ್ಗಗಳ ಕಲ್ಯಾಧಿಕಾರಿ ಎಸ್.ವಿ.ನಿಂಬಾಳ, ಸಿಡಿಪಿಓ ನಿರ್ಮಲಾ ಸುರಪೂರ, ಪಿಡಿಓ ಆರ್.ಎಂ. ಆಸಂಗಿ, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಮಹಾಂತೇಶ ಸಾಸಾಬಾಳ, ಡಿಎಸ್‍ಎಸ್ ಮುಖಂಡ ಅರವಿಂದ ಸಾಲವಾಡಗಿ ಇದ್ದರು. ಸಿ.ಜಿ.ಬಿರಾದಾರ ಸ್ವಾಗತಿಸಿದರು. ಎಸ್.ಸಿ.ಕುಂಟೋಜಿ ನಿರೂಪಿಸಿದರು. ಆರ್.ಎಂ.ರಾಜರತ್ನ ವಂದಿಸಿದರು.