ಸಾಮಾಜಿಕ ಸಮಾನತೆಯ ಹರಿಕಾರ ಅರಸು : ಚಿದ್ರೆ
ಔರಾದ :ಆ.21: ಬಡವರ ದೀನದಲಿತರ ಅಭಿವೃದ್ಧಿಗೆ ಶ್ರಮಿಸಿದ ಡಿ.ದೇವರಾಜ ಅರಸು ಅವರು ನಾಡು ಕಂಡ ಅಪರೂಪದ ರಾಜಕಾರಣಿ ಜನಕಲ್ಯಾಣಕ್ಕೆ ಮಹತ್ವ ನೀಡಿದ ಅರಸು ಸಾಮಾಜಿಕ ನ್ಯಾಯದ ಹರಿಕಾರ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅಭಿಪ್ರಾಯಪಟ್ಟರು.
ಪಟ್ಟಣದ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ದಿ ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಿ.ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ರಕ್ತ ರಹಿತ, ಮೌನ ಕ್ರಾಂತಿಯ ಮೂಲಕ ಕನ್ನಡ ನಾಡಿನ ಭೂರಹಿತರಿಗೆ 7 ಲಕ್ಷ ಹೆಕ್ಟೆ?ರ್ ಭೂ ಒಡೆತನ ನೀಡುವ ಮೂಲಕ ಇಂದಿಗೂ ಜನ ಮಾನಸದಲ್ಲಿ ಪ್ರಾತಃ ಸ್ಮರಣೀಯರಾಗಿದ್ದು, ಸಾಮಾಜಿಕ ಸಮಾನತೆ ಹಿತದೃಷ್ಟಿಯಿಂದ ಕಡುಬಡವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿ ಬಡವರ ಬದುಕಿನಲ್ಲಿ ಹೊಸ ಆಶಾಕಿರಣ ಮತ್ತು ಹೊಸ ಬದುಕಿನ ಆಶಾಕಿರಣ ಮೂಡಿಸಿದವರು ಎಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ಸಾಮಾಜಿಕ ನ್ಯಾಯ ಒದಗಿಸಲು ಬಗರ ಹುಕುಂ ಸಾಗುವಳಿಕೆ ಪದ್ಧತಿ ಜಾರಿಗೆ ತಂದಿದ್ದು ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಣಯವಾಗಿದೆ. ಇದರಿಂದ ದೀನ ದಲಿತರು, ಬಡವರು ಮತ್ತು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ರಾಜಕುಮಾರ ಹಲ್ಮಡಗೆ ಉಪನ್ಯಾಸಕರಾಗಿ ಮಾತನಾಡಿ, ಡಿ. ದೇವರಾಜ ಅರಸು ವಿದ್ಯೆ ಕಲಿತು ಸಾಕಷ್ಟು ಜ್ಞಾನ ಪಡೆದ ಅವರು ಯಾವುದೇ ನೌಕರಿಗೆ ಹೋಗದೇ ತಮ್ಮ ಸ್ವಂತ ಗ್ರಾಮಕ್ಕೆ ಬಂದು ಕೃಷಿ ಕಾರ್ಯ ಕೈಗೊಂಡು ತಮ್ಮ ಗ್ರಾಮಕ್ಕೆ ಮಾದರಿಯಾಗುವ ಹಾಗೆ ಕೆಲಸ ಮಾಡಿದರು. ಬಡವರ ಸಮಸ್ಯೆಯನ್ನು ಮನೆಯಲ್ಲಿ ಕುಳಿತುಕೊಂಡು ಕೇಳಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದರು. ನಂತರ ಅವರು ಜನನಾಯಕರಾಗಿ ಹೊರಹೊಮ್ಮಿದರು. ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದವರ ಧ್ವನಿಯಾಗಿದ್ದರು ಎಂದರು.
ಬಿಸಿಎಂ ತಾಲೂಕು ಅಧಿಕಾರಿ ರವೀಂದ್ರ ವಿ. ಮೇತ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಜನರಿಗೆ ಹಾಗೂ ಎಲ್ಲರಿಗೂ ಸಮಬಾಳು ಸಮಪಾಲು ನೀಡುವುದು ಅವರ ಆಶಯವಾಗಿತ್ತು. ಅರಸುರವರು ಭೂ ಕಂದಾಯ ಅಧಿನಿಯಮವನ್ನು ಸಹ ಜಾರಿಗೆ ತಂದರು.ಊಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿ, ಭೂಮಿಯನ್ನು ಬಡವರಿಗೆ ಹಂಚಿ ಸಾಮಾಜಿಕ ನ್ಯಾಯ ಒದಗಿಸಿದರಲ್ಲದೇ ಸೂರು ಇಲ್ಲದವರಿಗೆ ಸೂರು ಒದಗಿಸಿದರು. ವೃದ್ದಾಪ್ಯ ವೇತನ, ಅಂಗವಿಕಲರ ವೇತನ ಮತ್ತು ಹಿಂದುಳಿದ ವರ್ಗಗಳ ನಿರ್ದೇಶನಾಲಯ ಸಹ ಜಾರಿಗೆ ತಂದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ರಘುವೀರಸಿಂಗ್ ಠಾಕೂರ್, ಬಿಸಿಎಂ ನಿವೃತ್ತ ಅಧಿಕಾರಿಯಾದ ಗದಿಗೆಪ್ಪ ಸಿದ್ದೇಶ್ವರ್, ಸೂರ್ಯಕಾಂತ ವಲ್ಲೇಪೂರೆ, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಸಿಬ್ಬಂದಿಗಳಾದ ವಾಣಿಶ್ರೀ, ಸುಜಾತಾ, ಪ್ರೇಮಕುಮಾರ, ಘಾಳೆಪ್ಪ, ವಿಜಯಕುಮಾರ, ಪ್ರಾಂಶುಪಾಲ ಬಾಲಾಜಿ ಗಾಯಕವಾಡ್, ಮಾಳಗೆ, ಅನಿಲ ರಾಠೋಡ್, ಶಿವಕುಮಾರ, ಸಾಗರ, ರಾಜಕುಮಾರ ಡೊಂಗರೆ, ಅರ್ಷಾ ಸೇರಿದಂತೆ ಅನೇಕರಿದ್ದರು.
ಈ ವೇಳೆ ಕರ್ನಾಟಕ ಸರ್ಕಾರದ ಜೀವ ವೈವಿಧ್ಯ ಪ್ರಶಸ್ತಿ ಪುರಸ್ಕøತ ರಿಯಾಜ ಪಾಶಾ ಸೇರಿದಂತೆ ಇಲಾಖೆಯ ವಸತಿಯಲ್ಲಿ ಕಲಿತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗುರುತಿಸಿ ಸತ್ಕರಿಸಿದರು. ಮೇಲ್ವಿಚಾರಕ ಆರ್.ಬಿ ಪೂಜಾರ ಸ್ವಾಗತಿಸಿದರು. ಶಿವಕುಮಾರ ಅಲ್ಮಾಜೆ ನಿರೂಪಿಸಿದರು.