ಹಗರಗುಂಡದಲ್ಲಿ ಸಂಗೋಳಿ ರಾಯಣ್ಣ ಭಾವಚಿತ್ರಕ್ಕೆ ಅವಮಾನ
ತಾಳಿಕೋಟೆ:ಆ.21: ತಾಲೂಕಿನ ಹಗರಗುಂಡ ಗ್ರಾಮದಲ್ಲಿ ಕೆಲವು ದುಷ್ಕರ್ಮಿಗಳು ಗ್ರಾಮದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ವೃತ್ತದಲ್ಲಿ ಹಾಕಲಾದ ಭಾವಚಿತ್ರಕ್ಕೆ ಅಪಮಾನ ವೆಸೆಗಿರುವ ಘಟನೆ ನಡೆದಿದೆ.
ತಾಲೂಕಿನ ಹಗರಗುಂಡ ಗ್ರಾಮದಲ್ಲಿ ಆಗಸ್ಟ್ 19ರ ಮಧ್ಯರಾತ್ರಿಯಲ್ಲಿ ಗ್ರಾಮದ ಹನುಮಂತ ದೇವರ ದೇವಸ್ಥಾನದ ಹತ್ತಿರ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಟ್ಟೆಯ ಮೇಲೆ ಭಾವಚಿತ್ರ ಇರುವ ಬ್ಯಾನರ್ಗೆ ಚಪ್ಪಲಿ ಹಾರ ಹಾಕಿ ಅದೇ ಬ್ಯಾನರ್ ಕೆಳಗೆ ಕಪ್ಪು ಬಣ್ಣದ ಗುರುತಿನಿಂದ ಜೈ ಟಿಪ್ಪು ಸುಲ್ತಾನ್ ಅಂತ ಬರೆದಿದ್ದಾರೆ, ಈ ಘಟನೆಯ ಸುದ್ದಿ ಮುಂಜಾನೆ ಗ್ರಾಮದಲ್ಲಿ ಹರಡಿ ಕೆಲವು ಸಮಯದವರೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಡಿವಾಯ್‍ಎಸ್‍ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‍ಐ ರಾಮನಗೌಡ ಸಂಕನಾಳ, ಅಪರಾದ ವಿಭಾಗದ ಪಿಎಸ್‍ಐ ಆರ್.ಎಸ್.ಭಂಗಿ ಅವರು ಭೇಟಿ ನೀಡಿ ಗ್ರಾಮಸ್ಥರಿಗೆ ತಿಳಿಹೇಳಿ ಬೀಗುವಿನ ವಾತಾವರಣದಿಂದ ಕೂಡಿದ್ದ ಪರಸ್ಥಿತಿಯನ್ನು ಶಾಂತಗೊಳಿಸಿದರು.
ಈ ಘಟನೆಗೆ ಸಂಬಂದಿಸಿ ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಹಗರಗುಂಡ ಗ್ರಾಮದ ಸೋಮಪ್ಪ ತಂದೆ ಸಿದ್ದಪ್ಪ ಗಾಡಿ ಅವರು ದೂರು ನೀಡಿದ್ದು ಕಲಂ.298 ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ ಪ್ರಕರ್ಣ ದಾಖಲಿಸಿಕೊಂಡಿರುವ ಪೊಲೀಸ್‍ರು ಘಟನೆಗೆ ಕಾರಣರಾದ ಕಿಡಿಗೇಡಿಗಳ ಬಂದನಕ್ಕೆ ಜಾಲ ಬೀಸಿದ್ದಾರೆ.