ಬಿಜೆಪಿ ಸರ್ಕಾರದ ಕಾಮಗಾರಿ ನನ್ನದೇ ಎನ್ನುತ್ತಿರುವ ಬಿ.ಆರ್. ಸುಳ್ಳುಗಾರ: ಗುತ್ತೇದಾರ
ಆಳಂದ:ಆ.21: ಕ್ಷೇತ್ರದಲ್ಲಿ ಒಂದುವರೆ ವರ್ಷದಿಂದ ತಾಲೂಕಿನಲ್ಲಿ ಯಾವುದೇ ಕಾಮಗಾರಿಗಳು ಮಂಜೂರಿಯಾಗಿಲ್ಲ, ಸದ್ಯ ನಡೆಯುತ್ತಿರುವ ಕಾಮಗಾರಿಗಳು ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಮಂಜೂರು ಮಾಡಿದೆ, ಆದರೆ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಅವರು ಗುದ್ದಲಿ ಪೂಜೆ ಮಾಡಿ ನಾನೇ ಮಂಜೂರಾತಿ ತಂದಿದ್ದೇನೆ ಎಂದು ಜನರಿಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಆರೋಪಿಸಿದ್ದಾರೆ.
ಈ ಕುರಿತು ಪಟ್ಟಣದ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಶಾಸಕತ್ವದ ಅವಧಿಯ ಬಿಜೆಪಿ ಸರ್ಕಾರದಲ್ಲಿ ತಾಲೂಕಿಗೆ ಮಂಜೂರಾದ 300 ಕೋ.ರೂ.ಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಈಗ ಹಾಲಿ ಶಾಸಕರು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಕೆಕೆಆರ್‍ಡಿಯಿಂದ ಬರುವ ಅನುದಾನ ಸಂವಿಧಾನಬದ್ಧವಾದ ಅನುದಾನವಾಗಿದ್ದು, ಇದಕ್ಕೆ ಯಾವುದೇ ವಿಶೇಷ ಮಂಜೂರಾತಿಯ ಅವಶ್ಯಕತೆಯಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ದೊರೆಯುವಂತೆ ಆಳಂದ ಮತಕ್ಷೇತ್ರಕ್ಕೂ ಅನುದಾನ ಬಂದಿದೆ ಇದರಲ್ಲಿ ಅಂತಹ ವಿಶೇಷ ಏನೂ ಇಲ್ಲ. ಆದರೂ ನನ್ನದೇ ಅಭಿವೃದ್ಧಿ ಕಾರ್ಯವೆಂದು ಶಾಸಕರು ಹೇಳಿಕೊಂಡಿದ್ದ ಹಾಸ್ಯಕಿಡಾಗಿದೆ ಎಂದು ಅವರು ಛಡಿಸಿದರು.
ಇತ್ತೀಚಿಗೆ ಪಟ್ಟಣದಲ್ಲಿ ಶಂಕುಸ್ಥಾಪನೆ ಮಾಡಿರುವ 85.86 ಕೋ. ರೂ. ವೆಚ್ಚದ ಆಳಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಅಮೃತ ಯೋಜನೆಯು ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಮಂಜೂರಿಯಾದ ಯೋಜನೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹಾಗೂ ನಗರ ನೀರು ಸರಬರಾಜು, ನೈರ್ಮಲೀಕರಣ ಹಾಗು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದ ರಾಜುಗೌಡ ಅವರಿಗೆ ಮನವಿ ಮಾಡಿಕೊಂಡು ಅಮೃತ ಯೋಜನೆಯಲ್ಲಿ ಆಳಂದ ಪಟ್ಟಣವನ್ನು ಸೇರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿತ್ತು ಆದರೆ ಮಂಜೂರಿಯಾದ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಯಿತು. ಹೀಗಾಗಿ ಅದರ ಶಂಕುಸ್ಥಾಪನೆ ಮುಂದೂಡಬೇಕಾಯಿತು ಎಂದು ಗುತ್ತೇದಾರ ಹೇಳಿದರು.
ಶಾಸಕ ಬಿ ಆರ್ ಪಾಟೀಲರಿಂದ ಯಾವುದೇ ಹೊಸ ಕಾಮಗಾರಿಗಳು ಕ್ಷೇತ್ರಕ್ಕೆ ಬಂದಿಲ್ಲ. ಕೇವಲ ಚಲಾವಣೆಯಲ್ಲಿರಬೇಕು ಎಂಬ ಉದ್ದೇಶದಿಂದ ನಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಬೇರೆ ಬೇರೆ ಹೆಸರು ಕೊಟ್ಟು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಅಮರ್ಜಾ ತುಂಬಿಸುವ ಯೋಜನೆಗೆ ನಮ್ಮಿಂದ ತಡೆಯಾಗಿದೆ ಎಂದು ಆರೋಪಿಸಿರುವ ಬಿ.ಆರ್. ಪಾಟೀಲ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಆ ಯೋಜನೆಯಲ್ಲಿ ಬಿಟ್ಟು ಹೋಗಿದ್ದ ಯಳಸಂಗಿ, ಮಾಡಿಯಾಳ, ಮದಗುಣಕಿ, ಝಳಕಿ ಕೆ, ಮಾದನಹಿಪ್ಪರ್ಗಾ, ಹಡಲಗಿ ಗ್ರಾಮದ ತಲಾ ಒಂದು ಹಾಗೂ ನಿಂಬಾಳ ಗ್ರಾಮದ 2 ಒಟ್ಟು 8 ಕೆರೆಗಳನ್ನು 58 ಕೋ.ರೂ ವೆಚ್ಚದಲ್ಲಿ ಸೇರಿಸಿದ್ದೇ ನಾನು. ಅಲ್ಲದೇ ತಾವು ಈಗ ಶಾಸಕರಾಗಿದ್ದೀರಿ ಅಲ್ಲದೇ ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದೀರಿ, ಮುಖ್ಯಮಂತ್ರಿಗಳ ಆಪ್ತರಾಗಿರುವ ತಾವು ಆ ಯೋಜನೆಗೆ ಈಗೇಕೆ ವೇಗ ಒದಗಿಸಿಕೊಡುತ್ತೀಲ್ಲ ಎಂದು ಗುತ್ತೇದಾರ ಅವರು ಪ್ರಶ್ನಿಸಿದರು.
ಕೆಕೆಆರ್‍ಡಿಬಿಗೆ 5 ಸಾವಿರ ಕೋ. ರೂ ನೀಡುವ ತೀರ್ಮಾನ ಮಾಡಿದ್ದ ಬಿಜೆಪಿ ಸರ್ಕಾರ. ಜೆಜೆಎಂ ಯೋಜನೆಯಲ್ಲಿ ತಾವು ಶಂಕುಸ್ಥಾಪನೆ ಮಾಡಿರುವ ಕೋರಹಳ್ಳಿ ಮತ್ತು ಇತರೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಂಜೂರಿ ದೊರೆತಿದ್ದು ತಮ್ಮ ಅವಧಿಯಲ್ಲಿಯೇ ಇದಕ್ಕೆ ಬೇಕಾದ ಸರ್ಕಾರದ ದಾಖಲೆಗಳನ್ನು ಜನರ ಎದುರಿಗೆ ತೆರೆದಿಡಲಿ. ತಾಲೂಕಿನಲ್ಲಿ ಈ ಹಿಂದೆ ಗುತ್ತಿಗೆ ಆಧಾರದ ಮೇಲೆ ನೇಮಕವಾದ ಕೆಲಸಗಾರರನ್ನು ರಾಜಕೀಯ ದ್ವೇಷದಿಂದ ಸುಳ್ಳು ಕಾರಣ ನೀಡಿ ತೆಗೆದು ಹಾಕುತ್ತಿದ್ದಾರೆ. ಅವರ ಕುಟುಂಬವನ್ನು ಬೀದಿಗೆ ತಳ್ಳುವ ಕಾರ್ಯ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಚಾಲಕ ನಿರ್ವಾಹಕರನ್ನು ವರ್ಗಾವಣೆ ಮಾಡಿ ದ್ವೇಷರಾಜಕಾರಣ ನಡೆಸಿದ್ದಾರೆ ಎಂದು ಆಕ್ಷೇಪಿಸಿದರು.