ನೊಂದವರ ನೋವಿಗೆ ಧ್ವನಿಯಾದ ಡಿ.ದೇವರಾಜ ಅರಸು: ಸಂಗಮೇಶ ಬಬಲೇಶ್ವರ
ವಿಜಯಪುರ, ಆ. 21 : ನೊಂದವರ ನೋವಿಗೆ ಧ್ವನಿಯಾಗಿ ಸರ್ಕಾರದ ಯೋಜನೆಗಳನ್ನು ಎಲ್ಲಾ ವರ್ಗದವರಿಗೂ ತಲುಪಿಸಿ ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿ, ಮಾದರಿಯಾದವರು ಡಿ. ದೇವರಾಜ ಅರಸು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 109 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತ್ಯಾಗ, ಪ್ರೀತಿ ಜೀವನದ ಉಸಿರಾಗಿಸಿಕೊಂಡು ನೊಂದವರ, ಅಶಿಕ್ಷಿತರ, ನಿರ್ಲಕ್ಷಿತ ಸಮುದಾಯಗಳ ಪರ ಇಡೀ ಜೀವನವನ್ನು ಮೀಸಲಿಟ್ಟು, ಭೂಸುಧಾರಣೆಯ ಕಾಯ್ದೆಯಂತಹ ಮಹತ್ವ ಯೋಜನೆ ರೂಪಿಸಿದ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಉಳುವವನೆ ಭೂ ಒಡೆಯ ಎಂಬ ಕಾನೂನಿನ ಮೂಲಕ ಎಲ್ಲಾ ವರ್ಗಗಳಲ್ಲೂ ಸಮಾನತೆಯ ಆಶಯವನ್ನು ಬಿತ್ತಿದ ಅರಸು ಅವರು, ಹಳ್ಳಿಯ ವಿದ್ಯಾರ್ಥಿಗಳು ನಗರಗಳಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗಲು ವಸತಿ ನಿಲಯಗಳ ಸ್ಥಾಪನೆಗೆ ನಾಂದಿ ಹಾಡಿದವರು ಎಂದರು.
ನಿರುದ್ಯೋಗ ಸಮಸ್ಯೆ ಪರಹಾರಕ್ಕೆ ಶ್ರಮಿಸಿದರು. ಸಂಘರ್ಷಗಳಿಂದ ಕೂಡಿದ ಜೀವನ ನಡೆಸಿದರೂ ಕೂಡಾ ನಾಡಿನ ಏಳ್ಗೆಗಾಗಿ ಶ್ರಮಿಸಿದ ಅರಸು ಅವರ ಜೀವನ ಚರಿತ್ರೆ, ಸಾಧನೆ, ಯೋಜನೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳು, ಯುವಜನರಿಗೆ ಅವರ ಸಂದೇಶಗಳನ್ನು ಪ್ರಚಾರಪಡಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಶೋಷಿತರ ಅಭಿವೃದ್ಧಿಗಾಗಿ ಶ್ರಮಿಸಿದ ಅವರು, ಉಳುವವನೇ ಭೂ ಒಡೆಯ ಎನ್ನುವ ಭೂ ಸುಧಾರಣಾ ಕಾಯಿದೆ ಜಾರಿಗೆ ತರುವ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದಾರೆ. ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲ ವರ್ಗದವರ ಬಾಳು ಹಸನಗೊಳಿಸಿದವರು ಡಿ.ದೇವರಾಜ ಅರಸು. ಎಲ್ಲ ವರ್ಗದ ಜನರ ಏಳಿಗೆಗಾಗಿ ಹಾಗೂ ನಾಡು ನುಡಿಗಾಗಿ ಅವರ ಕೊಡುಗೆ ಅಪಾರವಾಗಿದೆ. ಆಡಳಿತ ಸುಧಾರಣೆಗೆ ಶ್ರಮ ವಹಿಸಿದ ಇಂತಹ ಮಹಾನ್ ವ್ಯಕ್ತಿಯ ಕೊಡುಗೆಗಳನ್ನು ಸ್ಮರಿಸುವ ಮೂಲಕ ಅವರ ತತ್ವಾದರ್ಶ ಅವರ ಕಾರ್ಯಗಳನ್ನು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಉಪನ್ಯಾಸಕ ವಿಷ್ಣು ಸಿಂಧೆ ಉಪನ್ಯಾಸ ನೀಡಿದರು.
ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ರಂಗನಾಥ ಬತ್ತಾಸೆ ಮತ್ತು ಸುನಂದಾ ಬತ್ತಾಸೆ ದಂಪತಿಗಳು ಹಾಗೂ ಸಂಗಡಿಗರಿಂದ ಡಿ.ದೇವರಾಜ ಅರಸು ಅವರ ಜೀವನ ಮತ್ತು ಸಾಧನೆಯ ಬಗ್ಗೆ ರೂಪಕವನ್ನು ಪ್ರದರ್ಶನ ಮಾಡಿದರು.
ವೇದಿಕೆಯ ಮೇಲೆ ಮಹಾನಗರ ಪಾಲಿಕೆಯ ಉಪಮೇಯರ್ ದಿನೇಶ ಹಳ್ಳಿ, ಪಾಲಿಕೆ ಸದಸ್ಯರುಗಳಾದ ಆರತಿ ಶಹಾಪೂರ, ಅಪ್ಪು ಪೂಜಾರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಘೋಣಸಗಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪೂರ, ಅರಣ್ಯ ಇಲಾಖೆಯ ಅಧಿಕಾರಿ ವನಿತಾ ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಸಿದ್ದು ರಾಯಣ್ಣನವರ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ಅಡಿವೆಪ್ಪ ಸಾಲಗಲ್, ದೇವೆಂದ್ರ ಮೆರೆಕರ, ವಿರೇಶ ಕುಲಕರ್ಣಿ, ವಿದ್ಯಾವತಿ ಅಂಕಲಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೆರವಣಿಗೆ: ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಭಾವಚಿತ್ರ ಮೆರವಣಿಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಕನಕದಾಸ ವೃತದ ಮೂಲಕ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ನಡೆಯಿತು.