ಉಳುವವನನ್ನೇ ಭೂಮಿ ಒಡೆಯನನ್ನಾಗಿಸಿದ ಪರಿವರ್ತಕ ದೇವರಾಜ ಅರಸು
ಸಂಜೆವಾಣಿವಾರ್ತೆ
ಕೊಟ್ಟೂರು:ಅ,21- ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರರಾದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಬಡವರ ಧ್ವನಿಯಾಗಿದ್ದು, ತುಳಿತಕ್ಕೊಳಗಾದವರ ಪರವಾಗಿ ನಿಂತಿದ್ದರು.  ಅದರ ಫಲವಾಗಿ ಅವರು ಉಳುವವನೇ ಭೂಮಿ ಒಡೆಯನ್ನಾಗಿಸಿದ ಪರಿವರ್ತಕರಾದರು ಎಂದು ತಹಶೀಲ್ದಾರ್ ಅಮರೇಶ್ ಜಾಲಹಳ್ಳಿ ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ  ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಹಾಗೂ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ನಡೆಸಲಾಯಿತು. ಇದನ್ನು ಉದ್ದೇಶಿಸಿ ಮಾತನಾಡಿದರು.
ಈಡೀ ದೇಶದಲ್ಲೇ ಅತ್ಯಂತ ಯಶಸ್ವಿ ಭೂ ಪುನರ್ ವಿಂಗಡಣೆ ಮಾಡಿದ ಹೆಸರು ಇವರಿಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಜನರಿಗೆ ಶಿಕ್ಷಣದ ಮೇಲೆ ಒತ್ತು ನೀಡಿ, ಆ ವರ್ಗದಿಂದ ಬಂದ ವಿದ್ಯಾರ್ಥಿಗಳಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಾಸ್ಟಲ್ಗಳನ್ನು ಸ್ಥಾಪಿಸಿ ಆ ಮೂಲಕ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯಲು ಸಹಾಯವಾಗಿದೆ ಎಂದರು.
ಸಮಾಜ ಸುಧಾರಕರಾದ, ಸಮಾಜದ ತಾರತಮ್ಯವನ್ನು ಕಡಿಮೆ ಮಾಡಲು ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ಕೇರಳದ ಸಂತರಾದ ಶ್ರೀ ನಾರಾಯಣ ಗುರುದೇವರು. “ಒಂದೇ ಮತ, ಒಂದೇ ಜಾತಿ ಹಾಗೂ ಒಂದೇ ದೇವರು” ಎಂಬ ವಾಕ್ಯವನ್ನು ನೀಡಿದ್ದರು.  ಕೆಳ ಜಾತಿಯವರಿಗೆ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸುತ್ತಿದ್ದರಿಂದ ಅವರಿಗಾಗಿಯೇ ಪ್ರತ್ಯೇಕ ಶಿವಮೂರ್ತಿಯನ್ನು ಸ್ಥಾಪಿಸಿ ಕ್ರಾಂತಿಯನ್ನು ಮಾಡಿದ್ದರು.  “ದೇವರ ಸೇವೆ ಮಾಡಿದರೆ ತನ್ನದೊಬ್ಬನದೇ ಏಳಿಗೆ, ಆದರೆ ದೇಶ ಸೇವೆ ಮಾಡಿದರೆ ಹಲವರ ಕಲ್ಯಾಣ ನಿಶ್ಚಯ” ಎಂದು ನಂಬಿದ್ದ ನಾರಾಯಣ ಗುರೂಜಿಯವರು ದೇಶ ಸೇವೆ ಮತ್ತು ಈಶ ಸೇವೆಗಳ ಸಮನ್ವಯವೇ ನಮ್ಮ ಗುರಿಯಾಗಬೇಕು ಎಂದು ಹೇಳುತ್ತಿದ್ದರು.  ಇಂತಹ ಇಬ್ಬರು ಮಹಾನ್ ವ್ಯಕ್ತಿಗಳು ನೀಡಿದ ಸಂದೇಶಗಳನ್ನು ನಾವು ಪಾಲಿಸಿಕೊಂಡು ಹೋಗಬೇಕು ಎಂದರು.
ಕೊಟ್ಟೂರಿನ ಬಿಸಿಎಂ ಹಾಸ್ಟಲ್ ವಿದ್ಯಾರ್ಥಿನಿಯರಾದ ಕುಮಾರಿ ಸಬಿಯಾ ಮತ್ತು ಎ ಎಂ ರಂಜಿತಾ ಡಿ.ದೇವರಾಜ ಅರಸುರವರ ಬದುಕು ಮತ್ತು ಸಾಧನೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್, ಅನ್ನದಾನೇಶ ಬಿ ಪತ್ತಾರ್, ಶಿರಸ್ತೇದಾರಾದ ರೇಖಾ, ಮಂಗಳ ಅರಮನೆ, ಗ್ರಾ ಆ ಅ ಹರೀಶ ಮತ್ತು ಕಛೇರಿಯ ಸಿಬ್ಬಂದಿಯವರು ಮತ್ತು ಬಿಸಿಎಂ ವಾರ್ಡ್ನ್ ಬಸವರಾಜ, ಶಿವಲೀಲಾ,  ಗೌರಮ್ಮ, ವಿಜಯಲಕ್ಷ್ಮಿ, ಹೌಸೀಫ್, ಜಾನ್, ನಾಗರಾಜ ಹಾಗೂ ಕೊಟ್ಟೂರಿನ ಬಿಸಿಎಂ ಹಾಸ್ಟಲ್ ವಿದ್ಯಾರ್ಥಿಗಳು ಇದ್ದರು.