ಹಿರಿಯ ನಾಗರಿಕರು, ವಿಶೇಷಚೇತನರಿಗೆ ಸಾಧನ-ಸಲಕರಣೆಗಳ ವಿತರಣೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.02:- ರಾಷ್ಟ್ರೀಯ ವಯೋಶ್ರೀ ಯೋಜನೆ ಹಾಗೂ ವಿಶೇಷಚೇತನ ವ್ಯಕ್ತಿಗಳಿಗೆ ಸಹಾಯ ಯೋಜನೆಯಡಿ ಜಿಲ್ಲೆಯ 240 ಹಿರಿಯ ನಾಗರಿಕರು ಹಾಗೂ 417 ಮಂದಿ ವಿಶೇಷಚೇತನರು ಸೇರಿದಂತೆ ಒಟ್ಟು 657 ಫಲಾನುಭವಿಗಳಿಗೆ 60 ಲಕ್ಷ ರೂ. ಮೊತ್ತದ ಸಾಧನ ಸಲಕರಣೆಗಳನ್ನು ನಗರದಲ್ಲಿಂದು ಉಚಿತವಾಗಿ ವಿತರಿಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರ್ಟಿಫೀಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಅಲಿಂಕೋ) ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸದನ ಸಲಕರಣೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕÀ ಸಿ. ಪುಟ್ಟರಂಗಶೆಟ್ಟಿ ಅವರು 5 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ದೇಹದ ಯಾವುದೇ ಭಾಗದಲ್ಲಿ ಊನವಾದರೂ ಅದು ಅಂಗವಿಲತೆಯಾಗಿದೆ. ಅಂಗವಿಕಲತೆ ಹುಟ್ಟಿನಿಂದ ಅಥವಾ ಹುಟ್ಟಿದ ಬಳಿಕ ಬರಬಹುದು. ಅಂಗವಿಕಲತೆ ಕತ್ತಲೆಯ ಬದುಕಾಗಿದೆ. ಹಾಗಂತ ಯಾವುದೇ ಅಂಗವಿಕಲರು ಧೃತಿಗೆಡಬಾರದು. ಅಗತ್ಯ ಸೌಲಭ್ಯಗಳನ್ನು ನೀಡಿ ಅವರ ಬಾಳಿನಲ್ಲಿ ಬೆಳಕು ಮೂಡಿಸಲು ಸರ್ಕಾರದೊಂದಿಗೆ ವಿವಿಧ ಸಂಘಸಂಸ್ಥೆಗಳು ನೆರವಾಗಿವೆ. ಅವುಗಳಲ್ಲಿ ಅಲಿಂಕೋ ಸಂಸ್ಥೆಯು ಒಂದಾಗಿದೆ ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ಸಾಮಾಜಿಕ ವ್ಯವಸ್ಥೆಯಲ್ಲಿ ಹಿರಿಯರು ಹಾಗೂ ವಿಶೇಷಚೇತನರನ್ನು ಎಲ್ಲರಂತೆ ಗೌರವದಿಂದ ನಡೆಸಿಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ 18416 ವಿಶೇಷಚೇತನರನ್ನು ಗುರುತಿಸಲಾಗಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರಿಗಿದೆ. ಇತ್ತೀಚೆಗೆ ಪ್ಯಾರಿಸ್‍ನಲ್ಲಿ ನಡೆದ ಪ್ಯಾರಾಲಂಪಿಕ್ಸ್‍ನಲ್ಲಿ ವಿಶೇಷಚೇತನರು ಚಿನ್ನ ಸೇರಿದಂತೆ ಒಟ್ಟು 60 ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷಚೇತನರಿಗೆ ಸಮಾನಾವಕಾಶ ನೀಡಿ ಗುರಿಮುಟ್ಟಲು ಪ್ರೇರೆಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವಿಶೇಷಚೇತನರಿಗೆ ಅನುಕಂಪ ಬೇಡ, ಅವಕಾಶ ನೀಡಬೇಕು. ಸರ್ಕಾರ ವಿಶೇಷಚೇತನರ ಪುನರ್ವಸತಿಗಾಗಿ ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಿದೆ. ವಿಶೇಷಚೇತನರಿಗೆ ಮೀಸಲಾಗಿರುವ ಸೌಲಭ್ಯಗಳನ್ನು ತಲುಪಿಸಿ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕು. ಗೌರವದಿಂದ ನೋಡಿಕೊಳ್ಳಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ ಎಂದರು.
ವಿಪರ್ಯಾಸ ಎಂದರೇ ನಾವು ಆಧುನಿಕತೆಗೆ ಮಾರುಹೋಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಿರಿಯ ಜೀವಗಳನ್ನು ವೃದ್ದಾಶ್ರಮಕ್ಕೆ ದೂಡುತ್ತಿದ್ದೇವೆ. ಮುಂದುವರಿದ ಸಮಾಜ ಹಾಗೂ ಅನುಕೂಲಕರ ವ್ಯಕ್ತಿಗಳೇ ಹಿರಿಯರನ್ನು ಸಹಿಸಿಕೊಳ್ಳಲಾಗದೇ ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದು, ಇದು ತಪ್ಪಬೇಕು. ತಂದೆ-ತಾಯಿಗಳೇ ಕಣ್ಣಿಗೆ ಕಾಣುವ ನಿಜವಾದ ದೇವರುಗಳು. ಹಿರಿಯ ನಾಗರಿಕರ ಜ್ಞಾನ, ಅನುಭವ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸಕಲೇಶ್ವರ, ಅಲಿಂಕೋ ಸಂಸ್ಥೆಯ ಕಿರಿಯ ವ್ಯವಸ್ಥಾಪಕ ರಿಷಭ್ ಮಲ್ಲೋತ್ರ, ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ನಗರದ ಪೇಟೆ ಪ್ರೈಮರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ನುಸಹಾ ಫಾತಿಮಾ ಖಾನ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದಳು.