ಟನ್ ಕಬ್ಬಿಗೆ ೫,೫೦೦ ರೂಪಾಯಿ ಎಫ್‌ಆರ್‌ಪಿ ದರ ನಿಗದಿಪಡಿಸಿ: ಭರತರಾಜ್ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೨:ಕರ್ನಾಟಕ ಕಬ್ಬು ೨೦೧೩ ರ ಕಾಯ್ದೆ ರದ್ದು ಪಡಿಸಿ, ಎಸ್.ಎ.ಪಿ ಪುನರ್ ಸ್ಥಾಪಿಸಬೇಕು, ಟನ್ ಕಬ್ಬಿಗೆ ೫೫೦೦.ರೂ ಎಫ್ ಅರ್ ಪಿ ನಿಗದಿ ಪಡಿಸಲು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್. ಭರತರಾಜ ಆಗ್ರಹಿಸಿದ್ದಾರೆ.
ಕಲ್ಬುರ್ಗಿ ನಗರದ ಯಾತ್ರಿ ನಿವಾಸ ಹೊಟೇಲ್ ಪಬ್ಲಿಕ್ ಗಾರ್ಡನ್ ನಲ್ಲಿ ಸೆಪ್ಟೆಂಬರ್ ೨೯.೩೦ ರಂದು ನಡೆದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನದಲ್ಲಿ ೧೩ ನಿರ್ಣಯಗಳನ್ನು ಅಂಗೀಕಾರ ಮಾಡಿದೆ ಇವುಗಳ ಜಾರಿಗೆ ಮುಂದಿನ ದಿನಗಳಲ್ಲಿ ಕಬ್ಬು ಬೆಳೆಗಾರರನ್ನು ಸಂಘಟಸಿ ಹೋರಾಟ ರೂಪಿಸಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತ ವಿರೋಧಿ ಸಹಕಾರಿ ಹಾಗೂ ಸಾರ್ವಜನಿಕ ರಂಗದ ಸಕ್ಕರೆ ಕಾರ್ಖಾನೆಗಳ ವಿರೋಧಿ ರಂಗರಾಜನ್ ಸಮಿತಿ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಸಕ್ಕರೆ ರಂಗವನ್ನು ಅನಿಯಮಿತ ಎಸ್.ಎ.ಪಿ ರದ್ದತಿಗಾಗಿ ತಂದಿರುವ ಕರ್ನಾಟಕ ಕಬ್ಬು (ಖರೀದಿ ಹಾಗೂ ಪೂರೈಕೆ ನಿಯಂತ್ರಣ) ಕಾಯ್ದೆ ೨೦೧೩ ರದ್ದುಗೊಳಿಸಬೇಕು. ೨೦೧೩ ಕ್ಕಿಂತ ಮುಂಚೆ ಇದ್ದ ರಾಜ್ಯ ಸಲಹಾ ಬೆಲೆ (ಎಸ್.ಎ.ಪಿ)ನ್ನು ಪುನರ್ ಸ್ಥಾಪಿಸಬೇಕು. ಕಬ್ಬು ಬೆಳಗಾರರ ಬೇಡಿಕೆಗಳ ಕುರಿತಂತೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿAದ ಪ್ರತಿಭಟಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
೯.೫ ಇಳುವರಿ ಆಧಾರದಲ್ಲಿ ೫೫೦೦ ಎಫ್ ಆರ್ ಪಿ ನಿಗದಿಪಡಿಸಲು ಒತ್ತಾಯಿಸಲಾಯಿತು. ಕೇಂದ್ರದ ರೈತ ವಿರೋಧಿ ೨೦೨೪ ರ ಸಕ್ಕರೆ ನಿಯಂತ್ರಣ ಮಂಡಳಿ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಯಿತು. ರಾಜ್ಯ ಸರ್ಕಾರ ಹರಿಯಾಣ ಪಂಜಾಬ್ ಮಾದರಿಯಲ್ಲಿ ಪ್ರತಿ ಟನ್ ಗೆ ೯೦೦ ರೂಪಾಯಿಗಳ ಎಸ್ ಎ ಪಿ ನಿಗದಿಪಡಿಸಬೇಕು ಹಾಗೂ ರೆವಿನ್ಯೂ ಶೇರಿಂಗ್ ಫಾರ್ಮುಲವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ತೂಕವನ್ನು ಪರೀಕ್ಷಿಸಲು ಕಬ್ಬು ಬೆಳೆಗಾರರ ಮುಖಂಡರ ಒಳಗೊಂಡ ಸಮಿತಿ ರಚಿಸಬೇಕು. ಮಾಹಿತಿ ನೀಡದೆ ಭೇಟಿ ನೀಡಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ.೫೦ ರಷ್ಟು ಪಾಲು ಕಬ್ಬು ಬೆಳೆಗಾರರಿಗೆ ನೀಡಬೇಕು. ಸಕ್ಕರೆ ಇಳುವರಿ ಘೋಷಣೆಯಲ್ಲಿ ಕಾರ್ಖಾನೆಯವರು ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆ ತೋರಿಸುತ್ತಿದ್ದಾರೆ ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಸಹಕಾರಿ ಮತ್ತು ಸಾರ್ವಜನಿಕ ಕಾರ್ಖಾನೆಗಳ ಪುನಶ್ವೇತನ ಕೇಂದ್ರ ಸಕ್ಕರೆ ಅಭಿವೃದ್ಧಿ ಮಂಡಳಿಯಿAದ ಬಡ್ಡಿ ರಹಿತ ಸಾಲ ನೀಡಬೇಕು. ೩೦ ಹಾಗೂ ೪೦ ವರ್ಷಗಳಿಗೆ ಗುತ್ತಿಗೆ ನೀಡುವುದಾಗಲಿ ಅಥವಾ ಮಾರಾಟ ಮಾಡುವ ಪ್ರವೃತ್ತಿಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ ೨೦೧೩ ಹಾಗೂ ತಿದ್ದುಪಡಿ ಅಧಿನಿಯಮ ೨೦೧೪ರ ಪ್ರಕಾರ ೨೦೨೨-೨೩ ನೇ ಸಾಲಿನಲ್ಲಿ ಎಥನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ೧೫೦ ರೂಪಾಯಿ ಹಾಗೂ ಎಥನಾಲ್ ಉತ್ಪಾದಿಸದ ಇರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ೧೦೦ ರೂಪಾಯಿ ಹೆಚ್ಚುವರಿಯಾಗಿ ನೀಡಬೇಕೆಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ತಕ್ಷಣ ರೈತರಿಗೆ ಹಣ ಪಾವತಿ ಮಾಡಿಸಬೇಕು. ಅದರಂತೆ ಪ್ರತಿವರ್ಷಗಳ ಬಾಕಿ ಹಣ ನೀಡಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅವುಗಳ ಜಾರಿಗಾಗಿ ಸರಕಾರಕ್ಕೆ ಒತ್ತಾಯಿಸಿದರು.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಜಿ.ನಾಗರಾಜ್ (ರಾಜ್ಯಾಧ್ಯಕ್ಷ), ಎನ್.ಎಲ್.ಭರತ್ ರಾಜ್(ರಾಜ್ಯ ಪ್ರಧಾನ ಕಾರ್ಯದರ್ಶಿ), ರಾಜ್ಯ ಉಪಾಧ್ಯಕ್ಷರುಗಳಾಗಿ, ಚಂದ್ರ ಗೌಡ ಕಲ್ಲನಗೌಡ ಪಾಟೀಲ್ ಬೆಳಗಾವಿ, ಶರಣಬಸಪ್ಪ ಮಮಶೆಟ್ಟಿ ಕಲಬುರಗಿ, ರುದ್ರಗೌಡ ನ್ಯಾಮಗೌಡ ಬಾಗಲಕೋಟೆ, ಕುಳ್ಳೇಗೌಡ ಮಂಡ್ಯ.
ರಾಜ್ಯ ಸಹಕಾರ್ಯದರ್ಶಿಗಳಾಗಿ ಭೀಮರಾಯ ಪೂಜಾರಿ ವಿಜಯಪುರ, ಶ್ರೀಮಂತ ಬೀರೆದಾರ ಕಲಬುರಗಿ, ಚಂದ್ರಶೇಖರ ಸಂಗಪ್ಪ ಕೊಪ್ಪಳ, ಸಿದ್ದರಾಮ ದಣ್ಣೂರ ಕಲಬುರಗಿ ರಾಜ್ಯ ಸಮಿತಿ ಸದಸ್ಯರುಗಳಾಗಿ, ಕೊಟ್ಟಿಗೆ ಮಲ್ಲಿಕಾರ್ಜುನ ವಿಜಯನಗರ, ಶುಕೂರ್ ಮಂಡ್ಯ, ಶ್ರೀನಿವಾಸ್ ಮಂಡ್ಯ, ಅವಿನಾಶ ಸಾರಥಿ ಬಾಗಲಕೋಟೆ, ಮಲ್ಲಿಕಾರ್ಜುನ ಸಾವುಕಾರ್ ವಿಜಯನಗರ, ಅಣ್ಣರಾಯ ಈಳಿಗೇರ ವಿಜಯಪುರ. ಗೋಪಾಲ ಶಿವಗದ್ದಿಗೆ ವಿಜಯಪುರ. ನಿಂಗಣ್ಣ ವಡಿಗೇರಿ ಯಾದಗಿರಿ. ಚನ್ನಪ್ಪ ಆನೆಗುಂದಿ ಯಾದಗಿರಿ, ಶಿವಮೋಗಪ್ಪ ಕಲಬುರಗಿ, ಪ್ರಕಾಶ ಜಾನಿ ಕಲಬುರಗಿ. ರಾಮಚಂದ್ರಪ್ಪ ಬೀದರ ಅವರು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.