ರೈತರ ಹಿತವೇ ನನಗೆ ಮುಖ್ಯ ಮುಖ್ಯ: ಶಾಸಕರಾದ ಬಸವರಾಜು ವಿ ಶಿವಗಂಗಾ*
ಸಂಜೆವಾಣಿ ವಾರ್ತೆ
ಚನ್ನಗಿರಿ.ಆ.೨೧; ರೈತರು ಬದುಕು ಚೆನ್ನಾಗಿದ್ದರೆ ದೇಶವೇ ನೆಮ್ಮದಿಯಿಂದ ಇರುತ್ತದೆ, ಅನ್ನದಾತರ ಹಿತವೇ ನನಗೆ ಮುಖ್ಯ ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. ತಾಲ್ಲೂಕಿನ ಉಬ್ರಾಣಿ – ಅಮೃತಾಪುರ ಏತ ನೀರಾವರಿ ಯೋಜನೆ ಪಂಪ್ ಹೌಸ್ ಕಂ ಜಾಕ್ ವೆಲ್ ವೀಕ್ಷಿಸಿ ಈ ವಿಷಯ ತಿಳಿಸಿದರು. ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ತಾಂತ್ರಿಕ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಭದ್ರಾ ನದಿ ಭರ್ತಿಯಾಗಿದ್ದು, ಉಬ್ರಾಣಿ – ಅಮೃತಾಪುರ ಏತ ನೀರಾವರಿ ಯೋಜನೆಗೆ ನೀರು ಹರಿಸಲಾಗುತ್ತಿದೆ, ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು. ಕೆರೆಗಳು ಭರ್ತಿತಿಯಾದರೆ ಅಂತರ ಜಲಮಟ್ಟ ಹೆಚ್ಚಾಗಲಿದೆ, ಇದರಿಂದ ಈ ಭಾಗದ ಅಡಿಕೆ ಬೆಳೆಗಾರರಿಗೆ ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಲಿದೆ ಎಂದರು, ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕನಸಿದೆ ಹಂತ ಹಂತವಾಗಿ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿ ಸರ್ಕಾರದ ಗಮನ ಸೆಳೆಯುವೆ ಎಂದರು. ಸಿರಿಗೆರೆ ಗುರುಗಳ ಇಚ್ಛಾ ಶಕ್ತಿಯಿಂದ ಚಿತ್ರದುರ್ಗ ದಾವಣಗೆರೆ ಜಿಲ್ಲೆಯಲ್ಲಿ ಇಂದು ಹತ್ತಾರು ಕೆರೆಗಳಿಗೆ ನೀರು ಹರಿಸಿ ಭರ್ತಿ ಮಾಡಲಾಗಿದೆ, ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಿರುವುದನ್ನ ನಾವು ಸ್ಮರಿಸಲೇ ಬೇಕೆಂದರು. ಈ ಸಂದರ್ಭದಲ್ಲಿ ರವಿ ಗೌಡ್ರು, ವಿಜೀ ಗೌಡ್ರು, ಯುವ ಮುಖಂಡ ಗಿರೀಶ್ ತಾವರೆಕೆರೆ ಭಾಗದ ರೈತ ಮುಖಂಡರು ಹಾಗೂ ಏತ ನೀರಾವರಿ ಯೋಜನೆ ಅಧಿಕಾರಿಗಳು ಉಪಸ್ಥಿತರಿದ್ದರು.