ಪ್ರತಿಭಾ ಪುರಸ್ಕಾರ
ರಾಮದುರ್ಗ,ಆ21: ವೀರಶೈವ ಲಿಂಗಾಯತ ಒಳಪಂಗಡಗಳು ಆಯಾ ಸಮಾಜದ ಪ್ರತಿಭಾವಂತರಿಗೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸಲು ಮತ್ತು ಸರ್ಕಾರಿ ಸೌಲಭ್ಯಕ್ಕಾಗಿದ್ದರೂ ಸಹಿತ ಲಿಂಗಾಯತ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಇರತ್ತದೆ ಹೊರತು ಮತ್ತೊಂದು ಸಮಾಜದೊಂದಿಗೆ ಸಂಘರ್ಷಕ್ಕಾಗಿ ಅಲ್ಲ ಎಂದು ಮಾಜಿಮುಖ್ಯಮಂತ್ರಿ, ಸಾಂಸದ ಜಗದೀಶ ಶೆಟ್ಟರ ಹೇಳಿದರು.
ಪಟ್ಟಣದ ಬಸವ ಗಾರ್ಡನ್‍ನಲ್ಲಿ ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಘಟಕ ಆಯೋಜಿಸಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಮತ್ತು ನೂತನ ಸಾಂಸದರಿಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಮಾತನಾಡಿ ಲಿಂಗಾಯತ ಒಳ ಪಂಗಡಗಳು ಕೇವಲ ಸಮಾವೇಶ, ಸಭೆ ಸಮಾರಂಭ ಮಾಡದೇ ಸಮಾಜದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರ್ತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಿದರೆ ಮಾತ್ರ ಬಸವಣ್ಣನವರ ಸಮ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು.
ತಾಳಿಕೋಟಿಯ ಪ್ರೌಢಶಾಲಾ ಶಿಕ್ಷಕ ಅಶೋಕ ಹಂಚಳಿ ಉಪನ್ಯಾಸ ನೀಡಿದರು. ತಾಲೂಕಾ ಘಟಕದ ಅಧ್ಯಕ್ಷ ಗುರುಸಿದ್ಧಪ್ಪ ಮುತ್ತೂರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವರಿ ಪುಠಾಣಿ, ಯುವ ಘಟಕದ ಅಧ್ಯಕ್ಷ ರಾಜು ಬೆಂಬಳಗಿ, ಗೋಕಾಕದ ಹರ್ಷಿತಾ ಸವಣೂರ ಇದ್ದರು.
ಮಹೇಶ ದೇಶನೂರ, ಶೇಖರಪ್ಪ ಯಾದವಾಡ, ಬಸವಣ್ಣೆಪ್ಪ ಹುದ್ದಾರ, ಶಶಿಧರ ಮಾಳವಾಡ ಇವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಪ್ರಧಾನಕಾರ್ಯದರ್ಶಿ ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಪ್ರೋ. ಎಸ್. ಎಂ. ಸಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾ ಬಟಕುರ್ಕಿ ನಿರೂಪಿಸಿದರು. ಸಿದ್ದು ಹದ್ಲಿ ವಂದಿಸಿದರು.