ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಹೋಬಳಿ ಮಟ್ಟದ ಕ್ರೀಡಾಕೂಟ ಆಯೋಜನೆ
ಅರಕೇರಾ.ಆ೨೧:ಅರಕೇರಾದೈಹಿಕ ಮತ್ತು ಮಾನಸಿಕ ಸಾಮಾರ್ಥ್ಯವನ್ನು ಪ್ರದರ್ಶನ ಮಾಡುವುದಕ್ಕೆ ಕ್ರೀಡೆಗಳು ಸಹಕಾರಿ ಎಂದು ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರೌಢ ಶಾಲೆ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಕ್ರೀಡಾಕೂಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳು ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಸಕ್ತಿ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಬೇಕು ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ ಮಾತನಾಡಿ, ಶಿಕ್ಷಣದ ಅವಿಭಾಜ್ಯ ಅಂಗ ಕ್ರೀಡೆಯಾಗಿದೆ. ನಿರ್ಣಯಕರು ನೀಡಿದ ತೀರ್ಪಿಗೆ ಬದ್ಧರಿರಬೇಕು. ಊರಿನವರು ಆಟೋಟಗಳಿಗೆ ಸಹಕರಿಸಬೇಕು. ಅನಾವಶ್ಯಕ ಗದ್ದಲಗಳಿಗೆ ಆಸ್ಪದ ಮಾಡಿಕೊಡಬಾರದು. ಸೋಲು-ಗೆಲುವ ಸಾಮಾನ್ಯ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋತವರು ಹತಾಶರಾಗಬಾರದು ಮುಂದಿನ ಸಲ ಗೆಲ್ಲುವತ್ತ ಗುರಿ ಇಟ್ಟುಕೊಳ್ಳಬೇಕು ಎಂದರು.
ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಎಂ.ವಿ ಕವಡಿಮಟ್ಟಿ ಕ್ರೀಡಾ ದ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಶಾಲೆಗಳ ಪರಿಚಯ, ಕ್ರೀಡಾ ಜ್ಯೋತಿ ಮೆರವಣಿಗೆ ನಡೆಯಿತು. ನಂತರ ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ ಚಾಲನೆ ನೀಡಿದರು.
ಅರಕೇರಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ೧೪ ಶಾಲೆಗಳು ಪ್ರತಿನಿಧಿಸಿದ್ದವು. ಪ್ರತಿ ಶಾಲೆಗಳ ದ್ವಜದಲ್ಲಿ ತಾಲೂಕು ಕಲಂ ನಲ್ಲಿ ಹಿಂದಿನ ತಾಲೂಕು ’ದೇವದುರ್ಗ’ ಎಂದು ಬರೆಯಲಾಗಿತ್ತು. ಇದನ್ನು ಗಮನಿಸಿದ ಗಣ್ಯರು, ಅರಕೇರಾ ತಾಲೂಕು ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಆಡಳಿತಾತ್ಮಕವಾಗಿ ಅರಕೇರಾ ತಾಲೂಕು ಎಂದು ಬರೆಯಬೇಕಿತ್ತು. ಮುಂದಿನ ಪಂದ್ಯಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ, ಪ್ರಮುಖರಾದ ಕೆ.ಅನಂತರಾಜ ನಾಯಕ, ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್, ವಿರುಪಣ್ಣ ನಾಯಕ ದೊರೆ, ನಾಗರಾಜ ಕರ್ನಾಳ, ಬೂಧಾನಿಗಳಾದ ಸಿದ್ದಾರ್ಥ ಹವಲ್ದಾರ್, ಜಾವ್ಹೀದ್ ಚಿಂಚೋಳಿಕರ್, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಎಂ.ವಿ ಕವಡಿಮಟ್ಟಿ, ಸ.ನೌ.ಸಂ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಪಿಡಿಒ ವೆಂಕೋಬ ನಾಯಕ, ಮುಖ್ಯ ಶಿಕ್ಷಕ ಹುಸೇನಭಾಷ ಇತರರಿದ್ದರು.
ಚಿತ್ರಸುದ್ದಿ ಸಂಖ್ಯೆ ೨೦(೨): ಅರಕೇರಾ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರೌಢ ಶಾಲೆ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಕ್ರೀಡಾ ಜ್ಯೋತಿ ಪ್ರದರ್ಶನ ಮಾಡಿದರು.