ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ
ಚನ್ನಮ್ಮನ ಕಿತ್ತೂರು,ಆ21: ಕಿತ್ತೂರು ತಾಲೂಕಿಗೆ ಒಳಪಡುವ ಒಂದಿಷ್ಟು ಕಛೇರಿಗಳು ಸೇರಿದಂತೆ ಉಪನೊಂದಣಿ ಕಛೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕಾದರೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ತಾಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಮಾತನಾಡಿದವರು ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಪ್ರಾರಂಭವಾಗಿದ್ದು ಅವುಗಳು ಬಸಿಯದಂತೆ ನೋಡಿಕೊಳ್ಳಿ ಎಂದು ಹೇಳಿ ಕೆರೆ ಸರ್ವೇ ಮಾಡಲು ಸರ್ವೇ ಇಲಾಖೆಯವರಿಗೆ ಸೂಚಿಸಿದರು.
ಕೆಲವೊಂದಿಷ್ಟು ಶಾಲೆಗಳಲ್ಲಿ ಶೌಚಾಲಯವಿದ್ದರೂ ಇಲ್ಲದಂತಾಗಿದೆ. ಶಿಕ್ಷಕರಿಗೆ ಮಕ್ಕಳಿಗೆ ತೊಂದರೆಯಾಗುತ್ತಿದೆ. ದಾಖಲೆಯಲ್ಲಿ ಮಾತ್ರ ಶೌಚಾಲಯ ಹೆಸರಿದ್ದು, ಅವುಗಳು ಉಪಯೋಗಕ್ಕೆ ಬಾರದಂತಾಗಿವೆ. ಅಂತಹವುಗಳನ್ನು ಮಾಹಿತಿ ಪಡೆದು ನೂತನವಾಗಿ ನಿರ್ಮಿಸಲು ಕ್ರಮ ಜರುಗಿಸಬೇಕೆಂದು ಶಿಕ್ಷಣಾಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.
ಅರಣ್ಯ ಇಲಾಖೆಯವರಿಂದ ರೈತರು ಸಸಿಗಳನ್ನು ಖರೀದಿಸಿ ಹಚ್ಚುತ್ತಾರೆ. ಆದರೆ ಅದು ಬೆಳೆಯುವುದಿಲ್ಲ. ರೈತರು ನಷ್ಟಕ್ಕೊಳಗಾಗುತ್ತಾರೆ. ಅದಕ್ಕಾಗಿ ನರ್ಸರಿಯಿಂದಲೇ ಸಸಿ ಖರೀದಿಸಿದ ರಶೀದಿ ಪಡೆದುಕೊಳ್ಳಬೇಕು. ರೈತರಿಗೆ ಇದರ ನಷ್ಟವಾದರೆ ನರ್ಸರಿ ಕಂಪನಿಯವರೇ ಭರಿಸಬೇಕು ಎಂದರು.
ಕೃಷಿ ಇಲಾಖೆಯವರು ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯ ಮಾಹಿತಿ ನೀಡಲು ಆಯಾ ಗ್ರಾಪಂದಲ್ಲಿ ಸಭೆ ಕರೆಯಲು ಅಧಿಕಾರಿಗಳಿಗೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಂದ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ ಪೋನ್, ವಿಶೇಷಚೇತನರಿಗೆ ಕಿವಿ ಮಶಿನ್, ಊರುಗೋಲು ವಿತರಿಸಿದರು.
ಈ ವೇಳೆ ತಾಲೂಕಾಡಳಿತ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಜೀವ ಕೋಲೇರ, ತಹಶೀಲ್ದಾರ ರವೀಂದ್ರ ಹಾದಿಮನಿ, ತಾಪಂ ಇಓ ಕಿರಣ ಗೋರ್ಪಡೆ, ತಾಲೂಕ ಮಟ್ಟದ ಅಧಿಕಾರಿಗಳು ಸೇರಿದಂತೆ ತಾಪಂ ಸಿಬ್ಬಂದಿ, ಸಾರ್ವಜನಿಕರಿದ್ದರು. ನಿರೂಪಣೆ-ಸ್ವಾಗತ ಪಿಡಿಓ ರಾಜಶ್ರೀ ಪಟ್ಟಣಶೆಟ್ಟಿ, ವಂದನಾರ್ಪನೆ ಅಕ್ಷರ ದಾಸೋಹ ಪ್ರಕಾಶ ಮೆಳವಂಕಿ ಉಪಸ್ಥಿತರಿದ್ದರು.
