ಅಪ್ರಾಪ್ತ ವಿದ್ಯಾರ್ಥಿನಿಗೆ ಬ್ಲೇಡ್‌ನಿಂದ ಹಲ್ಲೆ- ಗೊಂದಲಕಾರಿ ವಾತಾವರಣ
ಪುತ್ತೂರು : ಪುತ್ತೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ತನ್ನದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಹಿಂದೂ ಸಮುದಾಯದ ವಿದ್ಯಾರ್ಥಿಯೊಬ್ಬ ತನ್ನ ಕೈಗೆ ಬ್ಲೇಡ್‌ನಿಂದ ಕೊಯ್ದು ಹಲ್ಲೆ ನಡೆಸಿರುವುದಾಗಿ ಆರೋಪಿಸಿದ ಘಟನೆ ಪುತ್ತೂರಿನಲ್ಲಿ ಮಂಗಳವಾರ ಗೊಂದಲಕಾರಿ ವಾತಾವರಣ ಸೃಷ್ಠಿಗೆ ಕಾರಣವಾಗಿದೆ.
ಪುತ್ತೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿರುವ ಬನ್ನೂರು ಗ್ರಾಮ ವ್ಯಾಪ್ತಿಯ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಮಂಗಳವಾರ ಮಧ್ಯಾಹ್ನ ವೇಳೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆ ತನ್ನದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ ಕಲಿಯುತ್ತಿರುವ ಹಿಂದೂ ಸಮುದಾಯದ ವಿದ್ಯಾರ್ಥಿನಿಯೊಬ್ಬನ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ.
ನಾನು ಯಾವಾಗಲು ಬೊಳುವಾರಿನಿಂದಾಗಿ ಕಾಲೇಜಿಗೆ ಬರುವುದು, ಇವತ್ತು ಬೆಳಿಗ್ಗೆ ಪುಸ್ತಕ ಖರೀದಿಸಲೆಂದು ಶ್ರೀಧರ್ ಭಟ್ ಅಂಗಡಿಯ ಬಳಿಯಾಗಿ ಬಂದಿದ್ದೆ. ಆದರೆ ಶ್ರೀಧರ್ ಭಟ್ ಅಂಗಡಿ ತೆರೆದಿರಲಿಲ್ಲ. ಅಲ್ಲಿ ಕಲಾ ವಿಭಾಗದ ಹಿಂದೂ ಸಮುದಾಯ ವಿದ್ಯಾರ್ಥಿ ಸೇರಿದಂತೆ ತುಂಬಾ ಜನರಿದ್ದರು. ಅವರು ನನ್ನ ಹಿಂದಿನಿಂದ ನನ್ನನ್ನು ಹಿಂಬಾಲಿಸಿಕೊಂಡು ಬಂದದ್ದು ನನಗೆ ಗೊತ್ತಾಗಿರಲಿಲ್ಲ. ಹೀಗೇಕೆ ಅವರು ಹಿಂಬಾಲಿಸಿಕೊಂಡು ಬರುತ್ತಿದ್ದಾರೆ ಎಂದು ನನಗೆ ಹೆದರಿಕೆಯಾಯಿತು. ಮತ್ತೆ ಒಬ್ಬನನ್ನು ಬಿಟ್ಟು ಅವರೆಲ್ಲರೂ ಓಡಿದರು. ಮತ್ತೆ ಅವನೊಬ್ಬನೇ ನನ್ನ ಹಿಂದಿನಿಂದ ಬಂದು ನಿಲ್ಲಿಸಿ ನೀನು (ಒಬ್ಬಳು ವಿದ್ಯಾರ್ಥಿನಿಯ ಹೆಸರು ಹೇಳಿ) ಅವಳ ಫ್ರೆಂಡ್ ಅಲ್ವಾ ಅಂತ ಕೇಳಿದ. ಹೌದು ಅಂದಾಗ, ಇಲ್ಲ ನಾನು ಅವಳ ಲೌವ್ ಮಾಡುವುದಿಲ್ಲ. ನಿನ್ನನ್ನೇ ಲೌವ್ ಮಾಡುತ್ತೇನೆ ಅಂದ. ಆಗ ನಾನು ಬಾಯಿಗೆ ಬಂದಂತೆ ಬೈದು, ಜಾತಿ ಗಲಾಟೆ ಎಬ್ಬಿಸಲು ಹೀಗೆಲ್ಲಾ ಮಾಡುವುದು ಅಂದೆ. ಆ ವೇಳೆ ಆತ ಹಾಗಲ್ಲ,ನಾನು ನಿನ್ನನ್ನೇ ಲೌವ್ ಮಾಡುತ್ತೇನೆ ಎಂದು ಅಡ್ಡ ಕೈಯಿಟ್ಟ. ಆಗ ನಾನು ಕೈಗೆ ಕುಟ್ಟಿದೆ. ಆ ವೇಳೆ ಆತ ಕೈಗೆ ಕೊಯ್ದು ಓಡಿದ. ಬ್ಲೇಡಿನಿಂದ ಕೊಯ್ದದ್ದು ಆಗಿರಬಹುದು ಎಂದು ಆಕೆ ಘಟನೆಯ ಕುರಿತು ಹೇಳಿಕೆ ನೀಡಿದ್ದಾರೆ.
ನಾನು ಕಾಲೇಜಿಗೆ ತೆರಳಿ ಮಾಹಿತಿ ನೀಡಿದಾಗ ಉಪನ್ಯಾಸಕಿಯೊಬ್ಬರು, ಕೈಗೆ ಕೊಯ್ದದ್ದೆಂದು ಹೇಳಬೇಡ, ಗ್ಲಾಸ್ ತಾಗಿ ಗಾಯಗೊಂಡದ್ದೆಂದು ಹೇಳು ಎಂದು ತಿಳಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಾರೆ.
ಈ ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಪಿಎಫ್‌ಐ, ಎಸ್‌ಡಿಪಿಐ ಸೇರಿದಂತೆ ಮುಸ್ಲಿಂ ಸಂಘಟನೆಯ ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಆಸ್ಪತ್ರೆಯ ಬಳಿ ಜಮಾಯಿಸಿ ಆರೋಪಿಯ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸತೊಡಗಿದರು. ಕೈಗೆ ಚೂರಿ ಹಾಕಿದ್ದೆಂದು ಹೇಳಬೇಡ, ಗ್ಲಾಸ್ ತಾಗಿದ್ದು ಎಂದು ಹೇಳು ಎಂದು ತಿಳಿಸಿರುವ ಉಪನ್ಯಾಸಕಿ ವಿರುದ್ದವೂ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸತೊಡಗಿದರು. ಇದರಿಂದಾಗಿ ಆಸ್ಪತ್ರೆಯ ವಠಾರದಲ್ಲಿ ಗೊಂದಲಕಾರಿ ಸನ್ನಿವೇಶ ನಿರ್ಮಾಣವಾಯಿತು. ಪ್ರಕರಣದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬಂದ ಪುತ್ತೂರು ನಗರ ಠಾಣೆ, ಸಂಚಾರ ಪೊಲೀಸ್ ಠಾಣೆ, ಮಹಿಳಾ ಠಾಣೆಯ ಪೊಲೀಸರು ಆಸ್ಪತ್ರೆಯ ಒಳಗೆ ಜಮಾಯಿಸಿದ್ದ ಮಂದಿಯನ್ನು ಸಮಧಾನಿಸಿ ಹೊರಗೆ ಕಳುಹಿಸಿದರು. ಆ ಬಳಿಕವೂ ಆಸ್ಪತ್ರೆಯ ವಠಾರದಲ್ಲಿ ಮುಸ್ಲಿಂ ಸಮುದಾಯದ ನೂರಾರು ಮಂದಿ ಜಮಾಯಿಸಿದ್ದರು. ಕಾಂಗ್ರೆಸ್, ಎಸ್‌ಡಿಪಿಐ ಪಕ್ಷದ ಮುಖಂಡರು ಭೇಟಿ ನೀಡಿ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಆರೋಪಿಯ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.