ಡಿ.ದೇವರಾಜ ಅರಸು ಮತ್ತು ನಾರಾಯಣಗುರು ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.21:- ನಂಜನಗೂಡು ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ಡಿ.ದೇವರಾಜ ಅರಸು ಮತ್ತು ಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬರು ಜನಮನದಲ್ಲಿ ಅಚ್ಚಳಿಯದಂತೆ ಉಳಿದಿರುವ ಏಕೈಕ ನಾಯಕ ದಿವಂಗತ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆ ಬಹುದೊಡ್ಡ ಕೊಡುಗೆಯಾಗಿದೆ. ಈಗಿನ ರಾಜಕಾರಣಕ್ಕೆ ದೇವರಾಜ ಅರಸು ಸ್ಪೂರ್ತಿಯಾಗಿದ್ದಾರೆ.
ಮಾದರಿ ರಾಜಕಾರಣಿಯಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕೇರಳ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ಶ್ರೀ ನಾರಾಯಣ ಗುರು ಅವರು ಜನಿಸಿ ಜಾತಿ ನಿರ್ಮೂಲನೆ ಮಾಡಲು ಹೋರಾಟವನ್ನು ನಡೆಸಿದ್ದರು. ಸಮ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಪ್ರತಿಯೊಬ್ಬರು ಗೌರವ ಸಮರ್ಪಣೆ ಮಾಡುವ ಮೂಲಕ ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಬಳಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಪ್ರಾಧ್ಯಾಪಕ ಪೃಥ್ವಿರಾಜ್ ಮಾತನಾಡಿ, ಮೈಸೂರು ಜಿಲ್ಲೆಯ ಹುಣಸೂರಿನ ಕಲ್ಲಹಳ್ಳಿ ಗ್ರಾಮದ ಡಿ.ದೇವರಾಜ ಅರಸು ಅವರು ಅರಸು ಮನೆತನದಲ್ಲಿ ಜನ್ಮ ತಾಳಿ ರಾಜ್ಯದ ಎಂಟನೆಯ ಮುಖ್ಯಮಂತ್ರಿಯಾಗಿ ಸದಾಕಾಲ ಬಡಜನರ ಸೇವೆಗಾಗಿ 20 ಅಂಶಗಳ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ಮಾಡಿ, ಜೀತ ಪದ್ಧತಿ, ಅಸ್ಪೃಶ್ಯತೆ ನಿವಾರಣೆ, ಉಳುವವನೇ ಭೂಮಿಯ ಒಡೆಯ ಅನ್ನುವಂತಹ ಬಡವರ ಬದುಕಿನ ಬದಲಾವಣೆಯ ಸಾಕಷ್ಟು ಶಾಸನಗಳನ್ನು ಜಾರಿ ಮಾಡಿ, ಇಂದಿಗೂ ಕೂಡ ರಾಜ್ಯದ ಮೂಲೆ ಮೂಲೆಯ ಪ್ರತಿಯೊಬ್ಬ ರೈತರು ಕೂಡ ಸ್ಮರಣೆ ಮಾಡಿಕೊಳ್ಳುವ ಏಕೈಕ ನಾಯಕ ಡಿ.ದೇವರಾಜ ಅರಸು. ಇಂತಹ ಮಹಾನ್ ಮೇದಾವಿ ನಾಯಕರು ಕರ್ನಾಟಕ ರಾಜ್ಯದ ಪುಣ್ಯಭೂಮಿಯಲ್ಲಿ ಜನ್ಮ ತಾಳಿರುವುದು ನಮ್ಮೆಲ್ಲರ ಭಾಗ್ಯ. ನಮಗೆ ತ್ಯಾಗ ಮಾಡಿದಂತಹ ನಾಯಕರನ್ನು ಮರೆತು ದ್ರೋಹಿಗಳಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರ ವಿದ್ಯಾಸಾಗರ್ ಕದಂಬ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ತುಳಿತಕ್ಕೊಳಗಾದ ಹಿಂದುಳಿದ ಜನರ ಶ್ರೇಯಭಿವೃದ್ಧಿಗಾಗಿ ಸದಾ ಚಿಂತಿಸುತ್ತಿದ್ದ ತಳಸಮುದಾಯದ ಬದಲಾವಣೆಗೆ ಸದಾ ಹಂಬಲಿಸುತ್ತಿದ್ದ ಹೋರಾಟಗಾರ ಶ್ರೀ ನಾರಾಯಣ ಗುರು ಕೇರಳ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿ ಇಡೀ ದೇಶದ ತಳ ಸಮುದಾಯದ ಪರ ನಿಂತು ಧ್ವನಿ ಮಾಡುತ್ತಿದ್ದ ಮಹಾನ್ ನಾಯಕರಲ್ಲಿ ಶ್ರೀ ನಾರಾಯಣ ಗುರು ಕೂಡ ಒಬ್ಬರು. ಜಾತಿ ವ್ಯವಸ್ಥೆಯಲ್ಲಿ ಮೇಲು ಕೇಳು ಎಂಬ ಭೇದ ಭಾವವನ್ನು ತೊಡೆದು ಹಾಕಲು ನಾರಾಯಣ ಗುರುವವರು ತಮ್ಮದೇ ಆದ ತತ್ವ ಆದರ್ಶಗಳನ್ನು ಪಾಲಿಸಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ರೂಪಿಸಿದ್ದರು. ದೇವಾಲಯಕ್ಕೆ ಪ್ರವೇಶ ಇಲ್ಲದೆ ಇದ್ದ ಸಂದರ್ಭದಲ್ಲಿ ತಾವೇ ಸ್ವತಹ ದೇವಾಲಯಗಳನ್ನು ನಿರ್ಮಿಸಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ದೇಶಾದ್ಯಂತ ಹೋರಾಟವನ್ನು ನಡೆಸಿದ್ದರು. ಇಬ್ಬರು ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲಾ ಮಕ್ಕಳಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಶಾಸಕರು ಗೌರವಿಸಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಜಯಂತೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ನಗರಸಭಾ ಪೌರಾಯುಕ್ತ ನಂಜುಂಡಸ್ವಾಮಿ, ಡಿವೈಎಸ್ಪಿ ರಘು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಸ್ವರ್ಣಲತಾ, ತಹಶೀಲ್ದಾರ್ ಗ್ರೇಡ್ 2 ಮಹೇಶ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ನಗರಸಭಾ ಸದಸ್ಯ ಗಾಯತ್ರಿ, ಮಾಜಿ ಜಿ.ಪಂ ಸದಸ್ಯರಾದ ಶಶಿರೇಖಾ, ಮುಖಂಡರಾದ ಮಹೇಶ್, ಖಾದರ್, ಜಯರಾಮ್, ಕೃಷ್ಣಕುಮಾರ್, ಗಿರೀಶ್ ಸೇರಿದಂತೆ ವಸತಿ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.