ಸಿಎಂ ವಿರುದ್ಧದ ಪ್ಯಾಸಿಕ್ಯೂಷನ್‍ಗೆ ವಕೀಲರ ವಿರೋಧ
ಸಂಜೆವಾಣಿ ನ್ಯೂಸ್
ಮೈಸೂರು: ಆ.21:– ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ವಕೀಲರು ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿದರು. ಮುಡಾ 50:50 ನಿವೇಶನ ಹಂಚಿಕೆ ವಿಷಯದಲ್ಲಿ ಹಗರಣ ಆಗಿದೆ ಎಂದು ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಮ್ಮ ಸಂಘದ ಸದಸ್ಯರಿಗೆ ಅನ್ಯಾಯವಾದಾಗ ಅವರ ಪರ ನಿಲ್ಲುವುದು ನಮ್ಮ ಸಂಪ್ರದಾಯ. ಸಿದ್ದರಾಮಯ್ಯ ಅವರು ವಕೀಲರೂ ಆಗಿದ್ದು, ನಮ್ಮ ಸಂಘದ ಆಜೀವ ಸದಸ್ಯರಾಗಿರುವುದರಿಂದ ಅವರಿಗೆ ಬಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಲೋಕೇಶ್, ವಕೀಲರಾದ ಉಮೇಶ್, ಕಾಂತರಾಜು, ತಿಮ್ಮಯ್ಯ, ತನುಜಾ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.