ದೇವರಾಜ ಅರಸು ಆಡಳಿತ ರಾಜ್ಯಕ್ಕೆ ಮಾದರಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.21:- ರಾಜ್ಯ ಕಂಡಂತಹ ಧೀಮಂತ ನಾಯಕ, ಹಿಂದುಳಿದ ವರ್ಗಗಳ ದೇವರು ಎಂದೇ ಕರೆಯಲಾಗುವ ಡಿ.ದೇವರಾಜ ಅರಸು ಆಡಳಿತ ಸೂರ್ಯ-ಚಂದ್ರ ಇರುವವರಗೂ ರಾಜ್ಯಕ್ಕೆ ಮಾದರಿ. ಅವರ ಆಡಳಿತವನ್ನು ಇಂದಿಗೂ ರಾಜ್ಯ ಸರ್ಕಾರ ನೆನೆದು ಅದರಂತೆ ನಡೆಯುತ್ತಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವತಿಯಿಂದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ದಿ.ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮೈಸೂರು ಹೆಮ್ಮೆಯಾಗಿರುವ ಡಿ.ದೇವರಾಜ ಅರಸು ಅವರು ತಂದಂತಹ ಸುಧಾರಣೆಗಳನ್ನು ನಾವು ಇಂದು ಆಡಳಿತದಲ್ಲಿ ಅಳವಡಿಸಿಕೊಂಡು ಹೋಗುತ್ತಿದ್ದೇವೆ. ಇಡೀ ರಾಜ್ಯ ಅಭಿವೃದ್ಧಿ ಪಥದತ್ತ ಹೋಗಲು ಅಡಿಪಾಯ ಹಾಕಿಕೊಟ್ಟರು. ಅವರ ಆಡಳಿತ ಅವಧಿಯಲ್ಲಿ ಭೂ ಸುಧಾರಣೆ, ಜೀತ ಪದ್ಧತಿ, ಪರಿಶಿಷ್ಟ ಜಾತಿ, ಪಂಗಡದವರಿಗೆ ತಂದಂತಹ ಕಾಯ್ದೆಗಳು, ಅಂಗವಿಕಲರಿಗೆ ಮಾಸಿಕ ವೇತನ, ವಿಧವಾ ವೇತನ ಸಾಮಾಜಿಕ ಸುಧಾರಣೆಗಳಾಗಿವೆ. ಆಶ್ರಯ ಯೋಜನೆಯಡಿ ನಿವೇಶನ ಇಲ್ಲದಿರುವವರಿಗೆ ಮನೆ ನೀಡುವ ಯೋಜನೆ ಇವೆಲ್ಲವೂ ಮರೆಯಲಾಗದಂತಹ ಕೊಡುಗೆಗಳು ಎಂದು ಹೇಳಿದರು.
ಸಣ್ಣ ಗ್ರಾಮದಲ್ಲಿ ಹುಟ್ಟಿದ ಅವರು ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿ ಸ್ಥಾನ ತಲುಪಿದ್ದರು. ಇಂತಹ ಮುಖ್ಯಮಂತ್ರಿ ಪಡೆಯಲು ನಾವು ಪುಣ್ಯ ಮಾಡಿದ್ದೆವು. ಅವರು ಹಾಕಿ ಕೊಟ್ಟಿರುವ ಮಾರ್ಗ ನಮಗೆ ಮಾದರಿ ಅವುಗಳನ್ನು ರಾಜಕೀಯದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮಾತನಾಡಿ, ಶೋಷಿತ ವರ್ಗದ ಸಮಗ್ರ ಅಭಿವೃದ್ಧಿಯ ಹರಿಕಾರ, ನೊಂದವರ ನಂದಾದೀಪ, ಧೀಮಂತ ನಾಯಕ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಡಿದ ಅದಮ್ಯ ಚೇತನ ಡಿ.ದೇವರಾಜ ಅರಸು. ಇಂತಹ ಮಹಾನ್ ವ್ಯಕ್ತಿ ಮೈಸೂರಿನವರಾಗಿರುವುದು ನಮ್ಮ ಹೆಮ್ಮೆ ಎಂದರು.
ಅರಸು ಅವರು ಮಾಡಿದ ಕಾರ್ಯಗಳೇ ಅಭಿವೃದ್ಧಿಯ ಹರಿಕಾರ ಎಂಬ ಬಿರುದುಗೆ ಸಾಕ್ಷಿಯಾಗಿವೆ. ಶೋಷಿತ ವರ್ಗಗಳ ಧ್ವನಿಯಾಗಿ ನಿಂತು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಡವರ ಅಭಿವೃದ್ಧಿಗಾಗಿ ಶ್ರಮಿಸಿದಂತವರು. ಭೂ-ಸುಧಾರಣೆ ಕಾಯ್ದೆಯಿಂದ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದ ಕಾರ್ಯ ಇಂದು ಪ್ರತಿಯೊಬ್ಬ ಬಡವರಿಗೆ ಸಿಕ್ಕಂತಹ ಜ್ಯೋತಿಯಾಗಿದೆ. ಇದರಿಂದ ಬಡವರಿಗೆ ಆರ್ಥಿಕ ಸಬಲೀಕರಣ ಸಿಕ್ಕಂತಾಗಿದೆ. ಇಂತಹ ಕಾಯ್ದೆಯಿಂದ ನಮ್ಮಂತಹ ಅನೇಕ ಬಡವರು ಹಿಂದುಳಿದ ವರ್ಗದ ಜನರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಡಿ.ದೇವರಾಜ ಅರಸು ತಮ್ಮ ಹೆಸರಿನಲ್ಲೇ ಇರುವಂತೆ ಜನರಿಗೆ ದೇವರ ರೂಪದಲ್ಲಿ ರಾಜನಂತೆ ಆಳ್ವಿಕೆ ನಡೆಸಿ ಅರಸನಂತೆ ಬದುಕಿದ್ದಂತಹ ಚೇತನ ವ್ಯಕ್ತಿ. ಮುಖ್ಯಮಂತ್ರಿ ಆಗಿ ಅಧಿಕಾರ ತೆಗೆದುಕೊಂಡ ನಂತರ ಬಡವರ ಪರ ನಿಂತರು. ರಾಷ್ಟ್ರರಾಜಕಾರಣ ಇತಿಹಾಸದಲ್ಲೇ ಉಳುವವನೇ ಭೂಮಿಯ ಒಡೆಯ ಕಾಯ್ದೆಗೆ ಒಪ್ಪಿಗೆ ಸೂಚಿಸಿ ಜಾರಿಗೆ ತಂದಂತಹ ಮೊದಲ ವ್ಯಕ್ತಿಯಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಪೂಜಿಸಬೇಕು ಎಂದರು.
ಶತಮಾನಗಳಿಂದ ಬಂದಂತಹ ಜೀತ ಪದ್ಧತಿ, ಜಮೀನ್ದಾರಿ ಪದ್ಧತಿಯನ್ನು ಹೋಗಲಾಡಿಸಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾನತೆಯಿಂದ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಟ್ಟಂತಂತಹವರು ಅರಸು ಅವರು. ಅಂತಹವರ ಗುಣ, ವ್ಯಕ್ತಿತ್ವ ಪ್ರತಿಯೊಬ್ಬ ಯುವ ಪೀಳಿಗೆಗೂ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ನಗರ ಪೆÇಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಾನಪದ ವಿದ್ವಾಂಸ ಹಿ.ಸಿ.ರಾಮಚಂದ್ರೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಮಾನಸ, ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.