ಅಭಿಮಾನಿಗಳಿಂದಲೇ ಕಲೆ ಉಳಿದಿದೆ: ವಿಜಯಲಕ್ಷ್ಮಿ
ಕೋಲಾರ,ಆ.೨೧- ಆದಿಮ ಬಹುದೊಡ್ಡ ಸಂಸ್ಥೆ. ಇದನ್ನು ಕಟ್ಟಲು ಶ್ರಮಿಸಿದ ಹಿರಿಯ ಸಂಸ್ಕೃತಿ ಚಿಂತಕರಿಗೆಲ್ಲಾ ನನ್ನ ಅಭಿನಂದನೆಗಳು. ಕಲೆ ಮತ್ತು ಸಂಸ್ಕೃತಿ ಇನ್ನೂ ಉಳಿದಿದೆ ಎಂದರೆ ಕಲಾಭಿಮಾನಿ, ಕಲಾಪೋಷಕರಿಂದಲೇ ಎನ್ನುವುದು ನಾವು ಮರೆಯಬಾರದು. ಆದಿಮ ಚುಕ್ಕಿಮೇಳದಲ್ಲಿ ನನ್ನ ಮಕ್ಕಳು ಕೂಡ ಭಾಗವಹಿಸಿ ನಾಟಕ, ಜಾನಪದ ಕಲೆಗಳ ಕಲಿತಿದ್ದಾರೆ. ಇಂತಹ ಸಂಸ್ಥೆಗಳ ಬೆಳವಣಿಗೆಗೆ ನಾವೆಲ್ಲರೂ ಸಹಕರಿಸಿ ಪ್ರೋತ್ಸಾಹಿಸಬೇಕಿದೆ. ಆಗ ಮಾತ್ರ ನೆಲಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಅಭಿಪ್ರಾಯಪಟ್ಟರು.
ನಗರ ಹೊರವಲಯದ ಶತಶೃಂಗ ಶ್ರೇಣಿಯ ತೇರಹಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ೨೦೮ ನೇ ಹುಣ್ಣಿಮೆ ಹಾಡು ಪ್ರಯುಕ್ತ ನಾಟಕ ದೇವನಾಂಪ್ರಿಯ ಅಶೋಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .
ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಟಿ.ಎಂ.ಅಶೋಕ್ ಕುಮಾರ್ ಮಾತನಾಡಿ, ಇತ್ತೀಚಿಗೆ ನಡೆದ ೨೦೦ರ ಹುಣ್ಣಿಮೆ ಹಾಡು ಸಂಭ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಇಲ್ಲಿ ನಡೆಯುವ ನಾಟಕ, ಜಾನಪದ ಕಲೆಗಳು, ಸಿನಿಮಾ ಚಿತ್ರೀಕರಣ ಇವೆಲ್ಲಾ ಆಗಾಗ ನೆನಪಿಗೆ ಬರುತ್ತವೆ. ಆದಿಮ ನಮ್ಮ ಕೋಲಾರ ಜಿಲ್ಲೆಯ ಹೆಮ್ಮೆ, ನೆಲ ಸಂಸ್ಕೃತಿಗಳ ಸಾಂಸ್ಕೃತಿಕ ಕೊಂಡಿ. ಆಗಾಗಿ ಈ ಸಂಸ್ಥೆಯನ್ನು ಮತ್ತಷ್ಟು ಬೆಳೆಸಬೇಕಾಗಿದೆ ಎಂದವರು ಆದಿಮ ಬಳಗದೊಂದಿಗೆ ಆರಂಭದಿಂದಲೂ ಇದ್ದೇನೆ, ಸದಾ ಇರುತ್ತೇನೆ ಎಂದು ಅಭಿಮಾನದಿಂದ ಹೇಳಿದರು.
ಕರ್ನಾಟಕ ಬ್ಯಾಂಕಿನ ಜಿಲ್ಲಾ ಹಿರಿಯ ಪ್ರಬಂಧಕ ಜಿ.ಆನಂದ ಬಾಬು ಮಾತನಾಡಿ, ಆದಿಮ ಕೇಂದ್ರಕ್ಕೆ ಬಹಳ ದಿನಗಳಿಂದ ಕರೆಯುತ್ತಿದ್ದರು. ನನ್ನ ಕೆಲಸದ ಒತ್ತಡದಲ್ಲಿ ಬರಲು ಸಾಧ್ಯವಾಗಿರಲಿಲ್ಲ. ಇಲ್ಲಿ ಬಂದ ಮೇಲೆ ಹಳೆ ಸಂಸ್ಕೃತಿಗಳ ಮುಂದುವರೆಸುತ್ತಾ ಇವತ್ತಿನ ಯುವ ಪೀಳಿಗೆಗೂ ತಲುಪುವಂತೆ ಮಾಡುತ್ತಿರುವುದು ತಿಳಿಯಿತು. ನಿಜಕ್ಕೂ ಉತ್ತಮ ಕೆಲಸವಿದಾಗಿದೆ ಎಂದರು.
ಕೃಷ್ಣಾಪುರ ದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಖ್ಯಾತ ನಾಟಕಕಾರ ಡಾ.ಎಂ.ಬೈರೇಗೌಡ ಮಾತನಾಡಿ, ಆದಿಮದೊಂದಿಗೆ ನನ್ನ ಸಂಬಂಧ ಬಹಳ ಕಾಲದ್ದು. ಕೃಷ್ಣಾಪುರದೊಡ್ಡಿಯಲ್ಲಿ ನಾನು ಒಂದು ಸಂಸ್ಥೆ ಕಟ್ಟಲು ಪ್ರೇರಣೆ ಆಗಿದ್ದು ಆದಿಮ. ಇಲ್ಲಿ ನಮ್ಮ ತಂಡ ನಾಟಕ ಪ್ರದರ್ಶಿಸಲು ಬಂದಿದೆ. ಮೂರನೇ ಬಾರಿ ಅವಕಾಶ ನೀಡಿದ ಆದಿಮ ಬಳಗಕ್ಕೆ ನನ್ನಅಭಿನಂದನೆಗಳು.
ಕಾರ್ಯಕ್ರಮದಲ್ಲಿ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಉಪಕುಲಪತಿಗಳಾದ ಡಾ. ವೆಂಗಮ್ಮ, ಡಾ. ಮೈತ್ರಿ, ಕರ್ನಾಟಕ ಬ್ಯಾಂಕಿನ ಎ.ಎಸ್.ರೆಡ್ಡಿ, ಗುಂಡಪ್ಪ ದೇವಿಕೇರಿ, ನೀಲಕಂಠೇಗೌಡ, ಬಾಲಾಜಿ ಪ್ರಿಂಟರ್ಸ್ ಶ್ರೀನಿವಾಸ್, ಆದಿಮ ಅಂಬರೀಷ್, ಶಿಕ್ಷಕರಾದ ನಾರಾಯಣಸ್ವಾಮಿ, ರವಿಪ್ರಸಾದ್, ಅಮಿತ್ ಮಾಲೂರು, ವಿದ್ಯಾರ್ಥಿಗಳು, ಕಲಾವಿದರು ಹಾಗೂ ಕಲಾಭಿಮಾನಿಗಳು ಇದ್ದರು.