ಕನ್ನಡ ಜ್ಯೋತಿರಥಕ್ಕೆ ಕನ್ನಡಾಭಿಮಾನಿಗಳಿಂದ ಸ್ವಾಗತ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.21: ಜಿಲ್ಲೆಯಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ತಾಲ್ಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿರಥವನ್ನು ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ರಂಗನಾಥಪುರ ಕ್ರಾಸ್ ಬಳಿ ಶಾಸಕ ಎಚ್.ಟಿ.ಮಂಜು ಸೇರಿದಂತೆ ಅನೇಕ ಗಣ್ಯರು ಮತ್ತು ಕನ್ನಡಾಭಿಮಾನಿಗಳು ಸ್ವಾಗತಿಸಿದರು.
ಜಾನಪದ ಕಲಾ ತಂಡಗಳೊಂದಿಗೆ ಡೊಳ್ಳುಕುಣಿತ, ಪೂಜಾಕುಣಿತ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ಮೆರವಣಿಗೆಯಲ್ಲಿ ಶಾಸಕ ಹೆಚ್.ಟಿ.ಮಂಜು ಮಾತನಾಡಿ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿರಥವು 120 ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಲಿದ್ದು ನಮ್ಮ ತಾಲ್ಲೂಕಿನಲ್ಲಿ ಇಂದು ಮತ್ತೆ ನಾಳೆ ಯಾತ್ರೆ ಕೈಗೊಳ್ಳಲಿದೆ. ಮಂಡ್ಯ ಜಿಲ್ಲೆಯ ಹಾಗೂ ರಾಜ್ಯದ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಜನಪದವನ್ನು ಈ ರಥದಲ್ಲಿ ಬಿಂಬಿಸಲಾಗಿದೆ. ಕನ್ನಡ ಸಾಹಿತ್ಯಾಸಕ್ತರು ಕನ್ನಡ ಜ್ಯೋತಿರಥಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೆರಳುವ ಮಾರ್ಗದಲ್ಲಿ ಎಲ್ಲಾ ರೀತಿಯ ಸಹಕಾರ ಬೆಂಬಲ ನೀಡುವ ಮೂಲಕ ನಮ್ಮ ತಾಲೂಕಿನಿಂದ ಮುಂದಿನ ತಾಲೂಕಿಗೆ ಕಳುಹಿಸಿಕೊಡುವ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕಾಗಿದೆ. ಮಂಗಳವಾರ ವಿವಿಧ ಪಂಚಾಯಿತಿಗಳಲ್ಲಿ ಸಂಚರಿಸಿ ಪಟ್ಟಣದ ಪ್ರವಾಸಿಮಂದಿರದಲ್ಲಿ ತಂಗಿದ್ದು ಬುಧವಾರ ಬೆಳಿಗ್ಗೆ ಮುರುಕನಹಳ್ಳಿ ಮಾರ್ಗವಾಗಿ ತೆಂಡೇಕೆರೆ ನಂತರ ಪಾಂಡವಪುರ ತಾಲ್ಲೂಕಿಗೆ ಪಯಣಿಸಲಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಕೆಲಸಕಾರ್ಯಗಳನ್ನು ಕೇವಲ ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಮಾಡದೆ ಪ್ರತಿಯೊಬ್ಬ ಕನ್ನಡಿಗರು ನಾಡಿನ ಹಬ್ಬ ಎಂದು ತಿಳಿದು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಶ್ರಮಿಸಬೇಕಿದೆ. ಮಂಡ್ಯ ಜಿಲ್ಲೆಯ ಜನತೆ ಇಡೀ ರಾಜ್ಯದಲ್ಲಿಯೇ ಅಚ್ಚ ಕನ್ನಡವನ್ನು ಮಾತನಾಡಲು ಹೆಸರಾದವರು ಆದ್ದರಿಂದ ಕನ್ನಡ ಜ್ಯೋತಿರಥಕ್ಕೆ ಸಹಕಾರ ನೀಡುವ ಮೂಲಕ ಸಮ್ಮೇಳನದ ಯಶಸ್ಸಿಗೆ ಹಾಗೂ ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಉತ್ತಮ ಭಾವನೆ ಮೂಡಿಸುವ ಕೆಲಸವನ್ನು ಎಲ್ಲರೂ ಕೂಡಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಕನ್ನಡ ಜ್ಯೋತಿರಥಯಾತ್ರೆಯಲ್ಲಿ ತಾಲ್ಲೂಕು ಪಂಚಾಯಿತಿ ಇಓ ಸುಷ್ಮಾ, ಗ್ರೇಡ್-2ತಹಶೀಲ್ದಾರ್ ಲೋಕೇಶ್, ಸಿಡಿಪಿಓ ಅರುಣಕುಮಾರ್, ಸಮಾಜಕಲ್ಯಾಣಾಧಿಕಾರಿ ದಿವಾಕರ್, ಬಿಇಓ ಸೀತಾರಾಮು, ನರೇಗ ಎ,ಡಿ ಡಾ.ನರಸಿಂಹರಾಜು, ಪಿಡಿಓಗಳು, ಶಾಲಾ ಮಕ್ಕಳು ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕನ್ನಡದ ಅಭಿಮಾನಿಗಳು ಹಾಜರಿದ್ದರು.