ಮಾದರಿ ದೇವರಾಜ ಅರಸ್ ಹುಟ್ಟೂರು ಎಂದು ಮಾಡಬೇಕೆಂದು ಆಗ್ರಹ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ ಬೆಟ್ಟದಪುರ. ಆ.21:- ದಿವಂಗತ ಡಿ ದೇವರಾಜು ಅರಸುರವರ ಹುಟ್ಟೂರಾದ ಬೆಟ್ಟದತುಂಗ ಗ್ರಾಮದಲ್ಲಿ ಮಂಗಳವಾರ ಅರಸು ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 109 ನೇ ಜನ್ಮದಿನಾಚರಣೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ ಆಚರಿಸಲಾಯಿತು.
ಡಿ ದೇವರಾಜು ಅರಸುರವರ ಸಂಬಂಧಿಕರು ಹಾಗೂ ಗ್ರಾಮದ ಮುಖಂಡ ಟಿ.ಡಿ ರಾಜೇ ಅರಸ್ ಮಾತನಾಡಿ ಅಧಿಕಾರಿಗಳು ಅರಸುರವರ ಹುಟ್ಟಿದ ಹಬ್ಬದ ಆಚರಣೆ ಮಾಡುವ ತರಾತುರಿಯಲ್ಲಿ ಯಾವುದೇ ಪೂರ್ವಭಾವಿ ಸಿದ್ಧತೆಗಳಿಲ್ಲದೆ ಬೆಳಿಗ್ಗೆ ಹಾರ ಹಾಕಿ ಹೋಗಿದ್ದಾರೆ, ಆಚರಣೆ ಮಾಡುವುದಾದರೆ ಮೂರು ದಿನ ಮುಂಚಿತವಾಗಿ ಬಂದು ಗ್ರಾಮಸ್ಥರೊಡನೆ ಚರ್ಚಿಸಿ ಅದ್ದೂರಿಯಾಗಿ ಆಚರಣೆ ಮಾಡಬಹುದು, ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷತನದಿಂದ ಕಾರ್ಯಕ್ರಮ ಮಾಡುವುದರಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅರಸುರವರ ಹುಟ್ಟುರಾದ ಬೆಟ್ಟದತುಂಗಕ್ಕೆ ? 10 ಕೋಟಿ ಅನುದಾನ ನೀಡಿ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಕೊಟ್ಟಿದ್ದರು, ಆದರೆ ಇಂದಿಗೂ ಕೆಲಸಗಳು ಪೂರ್ಣಗೊಂಡಿಲ್ಲ , ಗ್ರಾಮದಲ್ಲಿರುವ ಸೋಮೇಶ್ವರ ದೇವಾಲಯವನ್ನು ನಿರ್ಮಿತಿ ಕೇಂದ್ರದವರು ಅರ್ಧಕ್ಕೆ ನಿಲ್ಲಿಸಿ ಕೈ ತೊಳೆದುಕೊಂಡಿದ್ದಾರೆ, ಇವತ್ತಿನವರೆಗೂ ಅಲ್ಲಿ ಪೂಜೆ ಕಾರ್ಯಗಳನ್ನು ಮಾಡಲು ಆಗುತ್ತಿಲ್ಲ, ಈಗಲಾದರೂ ಸರ್ಕಾರದವರು ಇತ್ತ ಗಮನಹರಿಸಿ ಉಳಿದ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಿ, ಮಾದರಿ ದೇವರಾಜ ಅರಸ್ ಹುಟ್ಟೂರು ಎಂದು ಮಾಡಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೀತಿ ಅರಸ್ ಮಾತನಾಡಿ ವರ್ಷಕ್ಕೆ ಎರಡು ಬಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು (ಜನ್ಮದಿನಾಚರಣೆ-ಪುಣ್ಯಸ್ಮರಣೆದಿನ )ಬಂದು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಫೆÇೀಟೋ ತೆಗೆದು ಇಲಾಖೆಗೆ ತೋರಿಸುವ ಉದ್ದೇಶ ಮಾತ್ರವಾಗಿದೆ, ಪಂಚಾಯಿತಿ ಪಕ್ಕದಲ್ಲಿರುವ ಪ್ರತಿಮೆಯನ್ನು ಪಂಚಾಯಿತಿ ವತಿಯಿಂದ ಸ್ವಚ್ಛತೆ ಮಾಡಲಾಗುತ್ತಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಆರೈಕೆ ಮಾಡಲು ಕಷ್ಟವಾಗುತ್ತಿದೆ, ಪಕ್ಷಿಗಳಿಂದ ಪ್ರತಿಮೆಯ ಮೇಲೆ ಗಲೀಜು ಮಾಡಿ ಸಮಸ್ಯೆ ಉಂಟು ಮಾಡುತ್ತಿವೆ, ಅಲ್ಲದೆ ಪ್ರತಿಮೆಯ ಬಳಿ ವಿದ್ಯುತ್ ದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ ಪಂಚಾಯಿತಿ ಮಟ್ಟದಲ್ಲಿ ಮಾಡುವ ಕೆಲಸಗಳನ್ನು ಮಾತ್ರ ನಾವು ಮಾಡುತ್ತಿದ್ದೇವೆ ಅದಕ್ಕೆ ಪ್ರತ್ಯೇಕವಾಗಿ ಇಲಾಖೆಯವರು ಸಹಕಾರ ನೀಡಿ ಪ್ರತಿಮೆ ಸ್ವಚ್ಛತೆ ಹಾಗೂ ರಕ್ಷಣೆಗೆ ಮುಂದಾಗ ಬೇಕೆಂದು ತಿಳಿಸಿದರು.
ಸುಬ್ರಹ್ಮಣ್ಯ ರಾಜೇ ಅರಸ್ ಮಾತನಾಡಿದರು. ಇದೆ ವೇಳೆ ಪಿಡಿಒ ಚೇತನ್ ಅವರಿಂದ ಸಿಬ್ಬಂದಿಗಳಿಗೆ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವೈ.ಕೆ ಸಿಂಗ್ರಿ, ಸಂತೋಷ್ ಅರಸ್, ಗೊರಳ್ಳಿ ಜಗದೀಶ್, ಆಲನಹಳ್ಳಿ ಕೆಂಪರಾಜು, ಕೃಷ್ಣ ಅರಸ್, ಜೈರಾಮ್ ರಾಜೇ ಅರಸ್, ವಿನಯ್ ಅರಸ್, ಸುಮತಿ, ಮಹಾದೇವ, ಅಣ್ಣಯ್ಯ, ಗಣೇಶ್, ಆನಂದ, ಚಂದ್ರಹಾಸ್, ಸೂರಿ, ಚೇತನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.