ಹಾಲು ಉತ್ಪಾದಕರು ನೌಕರರ ಶೋಷಣೆ ತಡೆಗೆ ಮನವಿ
ಕೋಲಾರ,ಆ.೨೧– ಕೋಲಾರ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು, ಮತ್ತು ಉತ್ಪಾದಕರಿಗೆ ಕೆಎಂಎಫ್ ಮತ್ತು ಕೋಮುಲ್ ಒಕ್ಕೂಟದಿಂದ ಆಗುತ್ತಿರುವ ಶೋಷಣೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಎಂಪಿಸಿಎಸ್ ನ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೋಲಾರ ಜಿಲ್ಲಾ ಎಂಪಿಸಿಎಸ್ ನ ನೌಕರರ ಸಂಘದ ಅಧ್ಯಕ್ಷ ಶಿವರುದ್ರಯ್ಯ ಮಾತನಾಡಿ, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ನೌಕರರಿಗೆ ಉದ್ಯೋಗ ಖಾತರಿಯೂ ಇಲ್ಲ ಕನಿಷ್ಠ ವೇತನವೂ ಇಲ್ಲ. ಒಕ್ಕೂಟದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾವು ಕೂಲಿಕಾರರ ಅಥವಾ ವೇತನ ಪಡೆಯುವ ಸಿಬ್ಬಂದಿ ವರ್ಗಕ್ಕೆ ಸೇರಿದವರ ಎಂಬುದು ಖಾತ್ರಿ ಇಲ್ಲವಾಗಿದೆ. ಕಾರ್ಮಿಕ ಇಲಾಖೆ ಪ್ರಕಾರ ಕನಿಷ್ಠ ರೂ ೨೫,೦೦೦ ಕ್ಕಿಂತ ಕಡಿಮೆ ಸಂಬಳ ತೆಗೆದುಕೊಳ್ಳುವವರು ಕಾರ್ಮಿಕ ಕಾನೂನಿಗೆ ಒಳಪಡುತ್ತಾರೆ ಎಂದರು.
ಆದರೆ ಇಲ್ಲಿ ಯಾವುದನ್ನು ಪರಿಗಣಿಸುವುದಿಲ್ಲ. ವರ್ಷದ ೩೬೫ ದಿನವೂ ಕೆಲಸ ಮಾಡಬೇಕು. ಒಕ್ಕೂಟ ಮತ್ತು ಕೆಎಂಎಫ್ ಸಿಬ್ಬಂದಿಯಂತೆ ನಮ್ಮನ್ನು ಪರಿಗಣಿಸಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು. ಈ ಬಗ್ಗೆ ಸೂಕ್ತವಾದ ರೀತಿಯಲ್ಲಿ ಅನುಕೂಲ ಮಾಡದಿದ್ದರೆ ಮಾನವ ಹಕ್ಕುಗಳು ಆಯೋಗ ಮತ್ತು ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ ಮುಖಂಡರು ಎಚ್ಚರಿಕೆ ನೀಡಿದರು.
ಆಡಳಿತ ಮಂಡಳಿಯು ಉತ್ಪಾದಕರಿಗೆ ಪ್ರತಿ ವರ್ಷ ಒಕ್ಕೂಟ ನಷ್ಟದಲ್ಲಿ ಇದೆ ಎಂದು ಉತ್ಪಾದಕರಿಗೆ ನೀಡುವ ದರವನ್ನು ಕಡಿತ ಮಾಡುತ್ತಿದೆ. ಸರಬರಾಜು ಮಾಡುವ ಪಶು ಆಹಾರದ ಗುಣಮಟ್ಟವು ವ್ಯತ್ಯಾಸವಿದ್ದು ಇದರಿಂದ ಉತ್ಪಾದಕರಿಗೆ ತೊಂದರೆಯಾಗಿ ಮಿಶ್ರತಳಿ ರಾಸುಗಳಿಗೆ ಸರಿಯಾದ ಪೋಷ್ಟಿಕಾಂಶವುಳ್ಳ ಆಹಾರ ನೀಡದೆ ಗುಣಮಟ್ಟದ ಹಾಲನ್ನು ಸಂಗ್ರಹಿಸುವುದು ಸಿಬ್ಬಂದಿಗೆ ತೊಂದರೆಯಾಗಿ ಸುಮಾರು ಸಂಘಗಳಲ್ಲಿ ಸಿಬ್ಬಂದಿ ಮತ್ತು ಉತ್ಪಾದಕರ ಮಧ್ಯೆ ಗಲಾಟೆಗಳಾಗಿರುತ್ತದೆ. ಇದರ ಹೊಣೆ ನೌಕರರು ಹೊರಬೇಕಾಗಿದೆ ಎಂದು ದೂರಿದರು.
ಸಂಘಗಳಿಂದ ಒಕ್ಕೂಟ ಹಾಲು ಖರೀದಿಸುವಾಗ ಅವರ ನಿಯಮಗಳನ್ನು ಪರಿಗಣಿಸಿ ಬೆಲೆ ನೀಡುತ್ತಾರೆ. ಆದರೆ ಉತ್ಪಾದಕರಿಗೆ ಸಂಘಗಳಲ್ಲಿ ಪ್ಯಾಟ್ ಆಧಾರದ ಮೇಲೆ ದರ ನೀಡಲು ಒತ್ತಡ ಮಾಡುತ್ತಿರುವುದು ಸರಿಯಲ್ಲ. ರಾಜ್ಯದ ಒಂದೊಂದು ಒಕ್ಕೂಟದಲ್ಲಿ ಒಂದೊಂದು ರೀತಿಯ ಬೆಲೆ ನೀಡುತ್ತಿರುತ್ತಾರೆ. ರಾಜ್ಯದ್ಯಂತ ಒಂದೇ ರೀತಿಯ ಏಕರೂಪ ತಂತ್ರಾಂಶ ಏಕೆ ಬೇಕು ಎಂದು ಪ್ರಶ್ನಿಸಿದರು.
ನಿಯೋಗದಲ್ಲಿ ನೌಕರರ ಸಂಘದ ಮುಖಂಡರಾದ ಗೂಳಿಗಾನಹಳ್ಳಿ ಮುನಿಯಪ್ಪ(ರಾಮು), ದೊಡ್ನಹಳ್ಳಿ ಶಿವಾನಂದ್, ಕೆಂಪಣ್ಣ, ಚೌಡಪ್ಪ, ಮುಂತಾದವರು ಇದ್ದರು.