ಹೃದಯ ಸಂಬಂಧಿ ಸಮಸ್ಯೆ ನಿರ್ಲಕ್ಷ ಬೇಡ
ಕೋಲಾರ,ಆ,೨೧- ಗ್ರಾಮೀಣ ಜನತೆ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸಬಾರದು, ಹೃದಯಾಘಾತ ಇಂದು ಹೆಚ್ಚಿನ ಜನತೆಯಲ್ಲಿ ಕಂಡು ಬರುತ್ತಿದ್ದು, ಇದರ ತಡೆಗೆ ಹೆಚ್ಚಿನ ಮುಂಜಾಗ್ರತೆ ವಹಿಸುವುದರಿಂದ ಜೀವ ಉಳಿಸಿಕೊಳ್ಳಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್ ಕರೆ ನೀಡಿದರು.
ತಾಲೂಕಿನ ವೇಮಗಲ್ ಯೋಜನಾ ಕಚೇರಿ ವ್ಯಕ್ತಿಯ ಸೂಗೂಟೂರು ವಲಯದ ವನರಾಶಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ನಾರಾಯಣ ಹೃದಯಾಲಯದ ವತಿಯಿಂದ ಉಚಿತ ಹೃದಯ ಸಂಬಂಧಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಸ್ವಾಸ್ಥ್ಯ ಕಾಪಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ಸಾಮಾಜಿಕ ಕಾರ್ಯಗಳ ಮೂಲಕ ಸಮಾಜಕ್ಕೆ ನೆರವು ನೀಡುತ್ತಿದೆ ಎಂದ ಅವರು, ಗ್ರಾಮೀಣ ಜನತೆಯಲ್ಲಿ ಹೃದಯ ಸಂಬಂಧಿಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಇಂತಹ ಉಚಿತ ಶಿಬಿರಗಳಲ್ಲಿ ತಪಾಸಣೆಗೆ ಒಳಪಡಲು ಪ್ರೇರಣೆ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾನರಾಶಿ ಒಕ್ಕೂಟದ ಅಧ್ಯಕ್ಷೆ ಶಿಲ್ಪ, ಗ್ರಾಮದಲ್ಲಿ ಇಂತಹ ಶಿಬಿರಹಮ್ಮಿಕೊಂಡಿರುವುದು ಸಂತಸದ ಕೆಲಸವಾಗಿದೆ, ಪೂಜ್ಯ ಹೆಗಡೆಯವರ ಆಶೀರ್ವಾದಿಂದ ಈ ಶಿಬಿರದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಪಾಸಣೆಗೆ ಒಳಗಾಗಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದು ಕೋರಿದರು.
ನಾರಾಯಣ ಹೃದಯಾಲಯದ ಡಾ.ಕೆ.ಕಿರಣ್ ಕುಮಾರ್, ಹೃದಯ ಸಂಬಂಧಿತ ಕಾಯಿಲೆಗಳ ಬಗ್ಗೆ ಕೂಲಂಕುಶವಾಗಿ ಮಾಹಿತಿ ನೀಡಿ, ಹೃದಯದ ಸಮಸ್ಯೆ ಎದುರಾದಾಗ ವಹಿಸಬೇಕಾದ ಮುಂಜಾಗ್ರತೆ, ಪ್ರಥಮ ಚಿಕಿತ್ಸೆ, ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವುದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಾರಾಯಣ ಹೃದಯಾಲಯದ ಟೆಕ್ನಿಷಿಯನ್ಸ್ ಮನೋಜ್, ಧಾನಿಯ್, ವೆಂಕಟರಾಮರೆಡ್ಡಿ, ರಮೇಶ್, ವಾನರಾಶಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಮಾಜಿ ಸದಸ್ಯರಾದ ವೀರಲಪ್ಪ ಮುನಿವೆಂಕಟ ರೆಡ್ಡಿ ಹಾಗೂ ಚಿಟ್ನಹಳ್ಳಿ ಒಕ್ಕೂಟದ ಅಧ್ಯಕ್ಷ ಸಿ.ಬಿ.ಆನಂದ್ ವಲಯ ಮೇಲ್ವಿಚಾರಕ ಲೋಕೇಶ್ ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿಲ್ಪ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿ ಶಿಲ್ಪ ಹಾಜರಿದ್ದರು ಸುಮಾರು ೧೨೦ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು.