ಜನಪದ ಆಸಕ್ತಿ ಬಿತ್ತಲು ಶಿಬಿರ ಅತ್ಯುತ್ತಮ ಸಾಧನ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಆ.೨೦: ಪರಂಪರೆಯಿಂದ‌ ಬಂದ ಜನಪದ‌ ಕಲೆಗಳ ಕುರಿತು ಆಸಕ್ತಿ ಬಿತ್ತಲು ಕಲಿಕಾ ಶಿಬಿರಗಳು ಅತ್ಯುತ್ತಮ ಸಾಧನವಾಗಿದೆ‌ ಎಂದು ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಅಭಿಪ್ರಾಯಪಟ್ಟರು.ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಪದವಿ ಪೂರ್ವ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಸೋಮವಾರ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಪದವಿ ಪೂರ್ವ ಕಾಲೇಜುಗಳ ಆಸಕ್ತ ಆಯ್ದ ವಿದ್ಯಾರ್ಥಿಗಳಿಗೆ ಮೂರು ದಿನಗಳ ಜನಪದ ಕಲೆಗಳ ಕಲಿಕಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ನಮ್ಮ ಜನಪದ ಕಲೆಗಳು ಜೀವಂತವಾಗಿ ಉಳಿಯಬೇಕು. ಜನಪದ ಹಾಡುಗಳನ್ನು ಕೇಳಿದಾಗ ಮನಸ್ಸಿಗಾಗುವ ಆನಂದವನ್ನು ವರ್ಣಿಸಲು ಅಸಾಧ್ಯವಾಗಿದೆ. ಜನಪದ ಕಲೆಗಳ ಕಲಿಕಾ ಶಿಬಿರ ಅಪರೂಪವಾಗಿದ್ದು, ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ತಾಳ್ಮೆ, ಆಸಕ್ತಿಯಿಂದ ಕಲಿಯಿರಿ ಎಂದು‌ ಕರೆ‌ ನೀಡಿದರು.ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್. ಯೋಗೀಶ್ ಮಾತನಾಡಿ, ನಮ್ಮ ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗದಂತೆ ರೂಪಿಸಲು ಜನಪದ ಕಲೆಗಳ ಕಲಿಕಾ ಶಿಬಿರ ಅರ್ಥಪೂರ್ಣವಾಗಿದೆ. ಯಾವ ಕಲೆ ಉಪೇಕ್ಷೆಗೆ ಒಳಗಾಗಿದೆಯೋ, ಅದನ್ನೇ ಯುವ ಮನಸ್ಸುಗಳಲ್ಲಿ ಬಿತ್ತುವ ಕೆಲಸವಾಗುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆ ಜಿಲ್ಲಾ ಸಂಯೋಜಕ ಡಾ. ಉಮೇಶ್ ಭದ್ರಾಪುರ ಮಾತನಾಡಿದರು.ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಲಾವಿದರಾದ ಹೊನ್ನಾವರದ ಗಣಪು ಬಡವಗೌಡ, ಚನ್ನರಾಯಪಟ್ಟಣದ ಎಂ. ಜಿ. ಮಂಜೇಗೌಡ, ನಳಿನಾಕ್ಷಿ, ಸುಶೀಲಾ ಷಣ್ಮುಗಂ, ಕೃಷ್ಣಮೂರ್ತಿ ಹಿಳ್ಳೋಡಿ, ಕೆ. ಎಸ್. ಮಂಜಪ್ಪ, ಮಹಾದೇವಿ, ನಾರಾಯಣ, ರಾಮಪ್ಪಗೌಡ  ಉಪಸ್ಥಿತರಿದ್ದರು. ಡಾ.ಕೆ.ಜಿ. ವೆಂಕಟೇಶ್ ಸ್ವಾಗತಿಸಿ, ಸೋಮಿನಕಟ್ಟಿ ನಿರೂಪಿಸಿ, ಧರ್ಮೋಜಿರಾವ್ ವಂದಿಸಿದರು.
ಜಿಲ್ಲೆಯ ವಿವಿಧ ಕಾಲೇಜುಗಳ ನೂರಾರು ಪಿಯು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.