ಮೌಲ್ಯಯುತ, ಆದರ್ಶ, ಪರೋಪಕಾರಿ ಜೀವನ ನಮ್ಮದಾಗಿಸಿಕೊಳ್ಳಬೇಕು
ಸಂಜೆವಾಣಿ ವಾರ್ತೆ
ದಾವಣಗೆರೆ, ಆ.20; ಛಾಯಾಗ್ರಹಣ ಕ್ಷೇತ್ರ ನಿರಂತರ ಆಧುನಿಕತೆ ಹೊಂದುತ್ತಿದ್ದು, ಕಾಲಕ್ಕೆ ತಕ್ಕಂತೆ ಛಾಯಾಗ್ರಾಹಕರು, ವೀಡಿಯೋಗ್ರಾಫರ್ ಗಳು ಸಹ ಹೊಸತನಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವ ಮೂಲಕ ವೃತ್ತಿ ಪ್ರಾವೀಣ್ಯತೆ ರೂಢಿಸಿಕೊಳ್ಳಬೇಕು ಎಂದು ಜಗಳೂರು ತಾ. ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.ನಗರದ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಹಿರೇಮಠದಲ್ಲಿ ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೋಗ್ರಾಫರ್‌ ಸಂಘದ 12ನೇ ವಾರ್ಷಿಕೋತ್ಸವ ಹಾಗೂ 184ನೇ ವಿಶ್ವ ಛಾಯಾ ಗ್ರಹಣ ದಿನಾಚರಣೆ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಸಾನಿಧ್ಯ ವಹಿಸಿ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಛಾಯಾಗ್ರಾಹಣ ಕ್ಷೇತ್ರವಿದ್ದ ಕಾಲವೇ ಬೇರೆ. ಆಧುನಿಗ ಜಗತ್ತಿನಲ್ಲಿರುವ ಪರಿಸ್ಥಿತಿಯೇ ಬೇರೆ ಎಂದರು. ಹಿಂದೆಲ್ಲಾ ಏನೂ ಇಲ್ಲದಿದ್ದರೂ ಜನರಲ್ಲಿ ಶಾಂತಿ, ವಿಶ್ವಾಸ, ನೆಮ್ಮದಿ ಇತ್ತು. ಈಗ ಎಲ್ಲವೂ ಇದ್ದರೂ ಪರಸ್ಪರರಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ. ಎಲ್ಲ ಇದ್ದರೂ ಸಂಸ್ಕಾರ ಇಲ್ಲ. ವಿದ್ಯೆ ಇದ್ದರೂ ಮೌಲ್ಯ ಇಲ್ಲ. ಇದೇ ಹಿಂದಿನ ಹಾಗೂ ಇಂದಿನ ದಿನಗಳಿಗೆ ಇರುವ ವ್ಯತ್ಯಾಸವಾಗಿದೆ. ದೇವರು ಮನಸ್ಸು ಮಾಡಿದರೆ ನಿರೀಕ್ಷೆ ಮಾಡದಷ್ಟು ಒಳ್ಳೆಯದನ್ನೇ ಮಾಡುತ್ತಾರೆ. ಅದೇ ದೇವರು ಕ್ರೋಧಿತನಾದರೆ ಕೊಟ್ಟಿದ್ದನ್ನಷ್ಟೇ ಅಲ್ಲ, ಚರ್ಮವನ್ನೂ ಬಿಡದೆ ಸುಲಿದು, ಎಲ್ಲವನ್ನೂ ಕಸಿಯುತ್ತಾನೆ. ಹಾಗಾಗಿ ಕ್ಷಣಿಕ ಸುಖ, ಸ್ವಾರ್ಥ, ಆಮಿಷಕ್ಕೆ ಒಳಗಾಗದೇ ಮೌಲ್ಯಯುತ, ಆದರ್ಶ, ಪರೋಪಕಾರಿ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಪ್ರಶಸ್ತಿ ಪ್ರದಾನ ಮಾಡಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಛಾಯಾಗ್ರಾಹಕರು ಸಂಕಷ್ಟದ ಬಾಳು ಬಾಳುತ್ತಿದ್ದಾರೆ. ಸರ್ಕಾರದಿಂದ ನಿವೇಶನ, ಸೂರು ಸೇರಿದಂತೆ ಸೌಲಭ್ಯ ಕೊಡಿಸಲು ತಾವು ಬದ್ಧರಿದ್ದೇವೆ. ಹಿರಿಯ ನಾಯಕರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನವರುಛಾಯಾಗ್ರಾಹಕ ವೃತ್ತಿ ಬಾಂಧ‍ವರ ಬಗ್ಗೆ ಸಾಕಷ್ಟು ಕಳಕಳಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ವಸತಿ ಯೋಜನೆ. ಸೌಲಭ್ಯಗಳನ್ನು ದೊರಕಿಸಿಕೊಡಲು ಸಚಿವರು, ಸಂಸದರು, ಶಾಸಕರ ಬಳಿ ಒತ್ತಡ ಹೇರುತ್ತೇನೆ ಎಂದು ತಿಳಿಸಿದರು.