ರಾಷ್ಟ್ರ ಕಂಡ ಅಪ್ರತಿಮ ಮುತ್ಸದ್ದಿ ರಾಜಕಾರಣಿ ದೇವರಾಜ ಅರಸು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೨೧;ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ರಾಷ್ಟ್ರ ಕಂಡ ಅಪ್ರತಿಮ ಮುತ್ಸದ್ದಿ ರಾಜಕಾರಣಿಯಾಗಿದ್ದರು ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು.ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.ದೇವರಾಜ ಅರಸು ಅವರು ಜ್ಯಾತ್ಯತೀತ ಹಾಗೂ ಸಾಮಾಜಿಕ ನ್ಯಾಯ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡಲು ಹೋರಾಡಿದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರಸು ಅವರು ಜಾರಿಗೆ ತಂದ ಯೋಜನೆಗಳ ಫಲವನ್ನು ನಾವೆಲ್ಲರೂ ಇಂದಿಗೂ ಅನುಭವಿಸುತ್ತಿದ್ದೇವೆ. ದೇವರಾಜ ಅರಸು ತಂದ ಸುಧಾರಣೆಗಳಿಂದಾಗಿಯೇ, ರಾಜ್ಯದ ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಅಭಿವೃದ್ದಿ ಹೊಂದಿದ್ದಾರೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ದೇವರಾಜ ಅರಸು ಅವರ ಮಾರ್ಗದಲ್ಲಿಯೇ ಸಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ನ್ಯಾಯ ದೊರಕಿಸಿ ಕೊಡಲು ಕಂಕಣ ಬದ್ದರಾಗಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.ಸ್ವತಃ ಬಡ ಕುಟುಂಬದಲ್ಲಿ ಜನಿಸಿದ ದೇವರಾಜ ಅರಸು ತಮ್ಮ ಸ್ವಂತ ಪರಿಶ್ರಮದಿಂದ ಎಲ್ಲವನ್ನು ಮೆಟ್ಟಿ ನಿಂತು ಜೀವನದಲ್ಲಿ ಮುಂದೆ ಬಂದರು. ಅರಸು ಎನ್ನುವ ಸಣ್ಣ ಸಮುದಾಯದಲ್ಲಿ ಜನಿಸಿದ ಅವರಿಗೆ ಯಾವುದೇ ಪ್ರಬಲ ಜಾತಿಗಳ ಬೆಂಬಲವಿರಲಿಲ್ಲ. ಆದರೂ ಎಲ್ಲಾ ಜಾತಿ ಜನರ ಪ್ರೀತಿ ವಿಶ್ವಾಸಗಳಿಸಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾದರು. ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಭೂ ರಹಿತ ಜನರಿಗೆ ಭೂ ಒಡೆತನ ಲಭಿಸುವಂತೆ ಮಾಡಿದರು.  ಹಾವನೂರು ವರದಿ ಜಾರಿ ಮಾಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು. 1973 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಹೆಗ್ಗಳಿಕೆ ಅವರದು ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು. ದೇವರಾಜು ಅರಸು ಜನ್ಮ ದಿನ ಮಾತ್ರವಲ್ಲದೆ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಜನ್ಮದಿನವೂ ಆಗಿದೆ.  ವಿದ್ಯಾರ್ಥಿಗಳು ಈ ಎಲ್ಲಾ ಮಹನೀಯರ ಕುರಿತಾದ ಪುಸ್ತಕಗಳನ್ನು ಓದಿ, ಅವರ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಚಿವ ಡಿ.ಸುಧಾಕರ್ ಕಿವಿಮಾತು ಹೇಳಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುನ್ನಲೆಗೆ ಬರಲು ದೇವರಾಜು ಅರಸು ಕಾರಣ. ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯಲ್ಲಿ ಚೋಮ ಕಡೆಯವರೆಗೂ ಭೂ ರಹಿತನಾಗಿಯೇ ಉಳಿಯುತ್ತಾನೆ. ಆದರೆ ರಾಜ್ಯದಲ್ಲಿ ಉಳುವವನೇ ಭೂ ಒಡೆಯ ಎನ್ನುವುದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ದೇವರಾಜು ಅರಸು ಅವರು ಲಕ್ಷಾಂತರ ಭೂ ರಹಿತ ಕೃಷಿ ಕಾರ್ಮಿಕರ ಪಾಲಿನ ವಿಮೋಚಕರಾಗಿ, ಭೂ ಒಡೆತನದ ಹಕ್ಕು ಕಲ್ಪಿಸಿದರು ಎಂದರು.