ಆನಂದದ ಅಭಿವ್ಯಕ್ತಿಯೇ ಕಾವ್ಯ : ಶೋಭಾಚೆಕ್ಕಿ
ಸೇಡಂ,ಆ.20-ಭಾವನೆಗಳನ್ನು ಅಕ್ಷರಗಳ ರೂಪದಲ್ಲಿ ಅಭಿವ್ಯಕ್ತಿಸಿದಾಗ ಉಂಟಾಗುವ ಆನಂದವೇ ಕಾವ್ಯವಾಗುತ್ತದೆ ಎಂದು ಹಿರಿಯ ಲೇಖಕಿ ಡಾ.ಶೋಭಾದೇವಿ ಚೆಕ್ಕಿ ಹೇಳಿದರು.
ನೃಪತುಂಗ ಅಧ್ಯಯನ ಸಂಸ್ಥೆಯು ಸೇಡಂನ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರಾವಣ ಕಾವ್ಯ ಸಂಜೆ ಶೀರ್ಷಿಕೆಯ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯ ಮತ್ತೊಬ್ಬರ ಒತ್ತಾಯಕ್ಕೆ ಉದ್ಭವಿಸಲಾರದು. ಅನುಭವ, ಅಧ್ಯಯನ, ಆಸಕ್ತಿಯ ಫಲವಾಗಿ ಮೂಡುವ ಕವನಗಳಿಂದ ಓದುಗರ ಮನಸು ಅರಳುವಂತೆ ಆಗುತ್ತದೆ. ಸಾಹಿತ್ಯದಲ್ಲಿ ಆಸಕ್ತಿ ಇರುವ ಎಲ್ಲರೂ ಬೆಳೆಯುವಂತಹ ಅವಕಾಶಗಳನ್ನು ಇಲ್ಲಿನ ನೃಪತುಂಗ ಅಧ್ಯಯನ ಸಂಸ್ಥೆಯು ಮಾಡುತ್ತಿರುವುದು ಅಭಿನಂದನಾರ್ಹ ಸಂಗತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಕಾಶ ಗೊಣಗಿ ಮತ್ತು ತಾಲ್ಲೂಕು ಬರಹಗಾರರ ಸಂಘದ ಅಧ್ಯಕ್ಷರಾದ ರುಕ್ಮಿಣಿ ಕಾಳಗಿ ಭಾಗವಹಿಸಿದ್ದರು. ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕವಿ ಆರತಿ ಕಡಗಂಚಿ ಅಧ್ಯಕ್ಷತೆ ವಹಿಸಿ, ವಾಚಿಸಿದ ಎಲ್ಲ ಕವಿಗಳ ಕವನಗಳನ್ನು ವಿಶ್ಲೇಷಿಸಿ, ಕಾವ್ಯಕೃಷಿ ಮಾಡಲು ಇಲ್ಲಿನ ಮನೋನೆಲ ಫಲವತ್ತಾಗಿದೆ ಎಂದು ಹೇಳಿದರು. ಹಿರಿಯ ಕವಿಗಳಾದ ಲಿಂಗಾರೆಡ್ಡಿ ಶೇರಿ, ಡಾ.ಎಂ.ಜಿ.ದೇಶಪಾಂಡೆ, ವಿಜಯಲಕ್ಷ್ಮಿ ಪತ್ತಾರ, ವಿಠಲ್ ಬರಮಕರ್, ಚಂದ್ರಕಲಾ ಪಾಟೀಲ, ಡಾ.ಸುವರ್ಣ ಅಳ್ಳೊಳ್ಳಿ, ಜ್ಯೋತಿ ಲಿಂಗಂಪಲ್ಲಿ, ಅಮರಮ್ಮ ಪಾಟೀಲ, ನಾಗಲಕ್ಷ್ಮಿ ಪಾಟೀಲ, ವಿಜಯಭಾಸ್ಕರರೆಡ್ಡಿ, ಸಂತೋಷ ತೊಟ್ನಳ್ಳಿ, ಶ್ರೀಶರಣು, ಮುರುಗೆಪ್ಪ ಹಣಮನಳ್ಳಿ, ಸವಿತಾ ಕುಂಬಾರ, ಪ್ರಮೀಳಾ ಪಾಟೀಲ, ಗಣಪತಿ ಬಡಿಗೇರ, ವೀರಯ್ಯಸ್ವಾಮಿ ಮಠಪತಿ, ಶಿವಾರೆಡ್ಡಿ ಸೇರಿದಂತೆ ಅನೇಕ ಹಿರಿಯ ಕಿರಿಯ ಕವಿಗಳು ಕವನ ವಾದಿಸಿದರು. ಪ್ರಮುಖರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಸುಲೋಚನತಾಯಿ ಬಿಬ್ಬಳ್ಳಿ, ಜನಾರ್ದನರೆಡ್ಡಿ ತುಳೇರ, ವೀರಭದ್ರಪ್ಪ ಟೆಂಗಳಿ, ಶರಣು ಮಹಾಗಾಂವ, ಆದಿತ್ಯ ಜೋಶಿ, ಕಾರ್ತಿಕರೆಡ್ಡಿ, ವೀರಭದ್ರಯ್ಯಸ್ವಾಮಿ ದಂಪತಿ ಭಾಗವಹಿಸಿದ್ದರು
ಸಿದ್ದಪ್ಪ ತಳ್ಳಳ್ಳಿ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಶ್ರೀ ಮಠಪತಿ ನಿರೂಪಿಸಿದರು. ಲಲಿತಾ ಕೋಕಟ್ ಪ್ರಾರ್ಥಿಸಿದರು.
ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ವಂದಿಸಿದರು.