ಯುವಕರಿಗೆ ಮತದಾನದ ಹಕ್ಕು ನೀಡಿದ್ದು ರಾಜೀವ್ ಗಾಂಧಿ
ಕಲಬುರಗಿ :ಆ.20: ದೇಶದ ಯುವಕರ ಮೇಲೆ ವಿಶ್ವಾಸವಿಟ್ಟು ಅವರಿಗೆ ಕೇವಲ 18 ವರ್ಷಕ್ಕೆ ಮತದಾನದ ಹಕ್ಕು ನೀಡಿದ ಕೀರ್ತಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು
ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಪಿ.ಡಿ.ಎ. ಕಾಲೇಜಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಜನರಿಗೆ ಮಾಹಿತಿ ತಂತ್ರಜ್ಞಾನದ ಲಾಭ ಲಭಿಸುತ್ತಿರುವುದರ ಹಿಂದೆ ರಾಜೀವ್ ಗಾಂಧಿಯವರ ದೂರದೃಷ್ಟಿಯಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರನ್ನು ಈ ದೇಶಕ್ಕೆ ನೀಡಿದ ಕಲಬುರಗಿ ಜಿಲ್ಲೆಯ ಜನರನ್ನು ತಾವು ಅಭಿನಂದಿಸುವುದಾಗಿ ನುಡಿದ ಅವರು, ಖರ್ಗೆಯವರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದರ ಹಿಂದೆ ದೇವರಾಜ ಅರಸು ಅವರ ಕೊಡುಗೆಯಿದೆ ಎಂದು ಸಹ ನುಡಿದರು.
ಈ ದೇಶಕ್ಕೆ ಮಹಾನ್ ಇತಿಹಾಸ ನೀಡಿದ ಮಹಾತ್ಮಾಗಾಂಧಿ, ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರಂತೆಯೇ ಖರ್ಗೆಯವರು ಸಂವಿಧನಾದ 371ಕ್ಕೆ ತಿದ್ದುಪಡಿ ತರುವ ಮೂಲಕ ಖರ್ಗೆಯವರು ಮಹಾನ್ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಇಂತಹ ನಂಬಿಕೆಯನ್ನು ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಈ ಭಾಗದ ಜನರು ಶಾಶ್ವತವಾಗಿ ಇಡಬೇಕೆಂದು ಶಿವಕುಮಾರ್ ಕಿವಿಮಾತು ಹೇಳಿದರು.
ಇದಕ್ಕೂ ಮುಂಚೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗ್ರಾಮ ಪಂಚಾಯತಿಗಳಿಗೆ ಸಾಂವಿಧಾನಿಕ ಅಧಿಕಾರ ನೀಡಿದ್ದಲ್ಲದೆ, ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ದಿ.ರಾಜೀವ್ ಗಾಂಧಿ ಅವರಿಗೆ ಸಲುತ್ತದೆ ಎಂದು ಸ್ಮರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಲ್ಲದೆ, ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿ ಮಾಡಿದ ಕೀರ್ತಿಯ ಜೊತೆಗೆ ಜನಸಾಮಾನ್ಯರಿಗೆ ಅಧಿಕಾರ ನೀಡಿದ ಶ್ರೇಯಸ್ಸು ದಿ.ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಆರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಅಪರ ಕಾರ್ಯದರ್ಶಿ ಉಮಾ ಮಹಾದೇವನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಎ.ವಸಂತಕುಮಾರ್, ಚಂದ್ರಶೇಖರ ಪಾಟೀಲ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಕಲಬುರಗಿ ಮೇಯರ್ ಯಲ್ಲಪ್ಪ ನಾಯ್ಕೊಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತಿ ಸಿಇಒ ಭಂವರ್ ಸಿಂಗ್ ಮೀನಾ ಹಾಗೂ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯ ನಗರ ಜಿಲ್ಲಾ ಪಂಚಾಯತಿ ಸಿಇಒಗಳು ಸೇರಿದಂತೆ ಇನ್ನಿತರರು
ಪಾಲ್ಗೊಂಡಿದ್ದರು.
ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರಕಾರಿ ಸೌಲಭ್ಯಗಳನ್ನು ವಿತರಿಸಲಾಯಿತು.
ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ 51 ತಾಲೂಕುಗಳ 51 ಅರ್ಹ ಅಭ್ಯರ್ಥಿಗಳಿಗೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಆಯ್ಕೆಯ ಆದೇಶ ಪತ್ರಗಳನ್ನು ನೀಡಲಾಯಿತು. ಇದರ ಜೊತೆಗೆ, ಕಲಬುರಗಿ ಮಹಾನಗರ ಪಾಲಿಕೆಯ 598 ಮಹಿಳಾ ಸ್ವಚ್ಛತಾ ಸಿಬ್ಬಂದಿಗೆ ತಲಾ ಎರಡು ಸೀರೆಗಳನ್ನು ಹಾಗೂ 461 ಪುರುಷ ಸ್ವಚ್ಛತಾ ಸಿಬ್ಬಂದಿಗೆ ಸ್ವಚ್ಛತಾ ಕಿಟ್‍ಗಳನ್ನು ವಿತರಿಸಲಾಯಿತು.
ಮತ್ತೊಂದೆಡೆ, ಕೇಂದ್ರ ಸರಕಾರದ ಸಂಜೀವಿನಿ- ಸ್ವಚ್ಛ ಭಾರತ ಅಭಿಯಾನದ ಒಗ್ಗೂಡಿಸುವಿಕೆ ಕಾರ್ಯಕ್ರಮದಡಿ ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳ 522 ಸದಸ್ಯೆಯರಿಗೆ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಆದೇಶ ಪತ್ರ ಹಾಗೂ 203 ಸದಸ್ಯೆಯರಿಗೆ ಕಸ ಸಂಗ್ರಹಣೆಯ ಲಘು ವಾಹನ ಚಾಲನಾ ತರಬೇತಿ ಪರವಾನಗಿ ಪತ್ರಗಳನ್ನು ವಿತರಿಸಲಾಯಿತು. ಏತನ್ಮಧ್ಯೆ, ಗ್ರಾಪಂ. ಮಟ್ಟದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಸ್ಥಳೀಯ ಆಡಳಿತಕ್ಕೆ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸಲು 67 ಬಿಎಂಟಿಗಳಿಗೆ ಆದೇಶ ಪತ್ರಗಳನ್ನು ನೀಡಲಾಯಿತು. ಇದೇವೇಳೆ, 77 ಗ್ರಾಮ ಕಾಯಕ ಮಿತ್ರರಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಅರ್ಹ ವಿಕಲಾಂಗ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.