ಮುಡಾ ಪ್ರಕರಣದಲ್ಲಿ ಸತ್ಯಕ್ಕೆ ಜಯಹೆದರಿಕೆ ಅನ್ನೋದು ಸಿಎಂ ರಕ್ತದಲ್ಲೇ ಇಲ್ಲ: ಡಿಸಿಎಂ ಡಿಕೆಶಿ
ಕಲಬುರಗಿ,ಆ.20-ಸಿದ್ದರಾಮಯ್ಯ ಅವರ ರಕ್ತದಲ್ಲಿ ಹೆದರಿಕೆ ಅನ್ನೋದು ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿನ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 40 ವರ್ಷಗಳ ಅವರ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರು ಹೆದರಿದ್ದನ್ನು ಎಲ್ಲಿಯೂ ನೋಡಿಲ್ಲ ಎಂದರು.
ಹೆದರಿಕೆ ಎಂಬುದು ಸಿದ್ದರಾಮಯ್ಯ ಅವರಲ್ಲಿ ಇಲ್ಲವೇ ಇಲ್ಲ ಎಂದರಲ್ಲದೆ, ಮುಡಾ ಪ್ರಕರಣದಲ್ಲಿ ಸಿಎಂ ತಪ್ಪು ಮಾಡಿಲ್ಲ. ಹಾಗಾಗಿ ಸತ್ಯಕ್ಕೆ ಜಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಓರ್ವ ದಲಿತ ಸಮುದಾಯದ ವ್ಯಕ್ತಿ ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಗೆಹ್ಲೋಟ್ ಅವರನ್ನು ರಾಜ್ಯಪಾಲ ಹುದ್ದೆಯಲ್ಲಿ ಕೂರಿಸಿದ್ದು ಸಂವಿಧಾನವೇ ಹೊರತು ಜಾತಿಯಲ್ಲ. ಬಿಜೆಪಿ ನಾಯಕರು ಅನಗತ್ಯ ವಿವಾದ ಎಳೆದು ತರಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು, ಪಕ್ಷದ ಹೈಕಮಾಂಡ್ ಹಾಗೂ ಸಚಿವರು, ಶಾಸಕರ ಸಂಪೂರ್ಣ ಬೆಂಬಲವಿದೆ ಎಂದು ನುಡಿದರು.
ರಾಜ್ಯದಲ್ಲಿ ಹತ್ತು ವರ್ಷ ನಮ್ಮದೇ ಸರ್ಕಾರ ಇರಲಿದೆ ಎಂದರಲ್ಲದೆ, ಅದರಲ್ಲಿ ಅನುಮಾನ ಬೇಡ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಕಲಬುರಗಿಯಲ್ಲಿ ಹೊಸ ಆಸ್ಪತ್ರೆ ಆಗಿದೆ. ಸಿ.ಟಿ.ರವಿ ಅವರನ್ನು ಈ ಆಸ್ಪತ್ರೆಗೆ ಸೇರಿಸಬೇಕು. ಅವರಿಗೆ ವಿವೇಚನ ಕಳೆದು ಹೋಗಿದೆ. ಹೀಗಾಗಿ ಕೂಡಲೆ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಯೇತರ ಆಡಳಿತ ಇರುವ ದೇಶದ ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಅದೇರೀತಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ರಾಜ್ಯದಲ್ಲಿ ನಡೆದಿರುವ ವಿದ್ಯಮಾನಗಳ ಕುರಿತು ಹೈಕಮಾಂಡ್‍ಗೆ ಮಾಹಿತಿ ನೀಡಲು ಅವರು ದಿಲ್ಲಿಗೆ ಹೋಗಿ ಬಂದಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ಇದ್ದರು.