ಮಟಕಾ, ಜೂಜಾಟ: 6 ಜನರ ಬಂಧನ
ಕಲಬುರಗಿ,ಆ.20-ನಗರದ ನೆಹರು ಗಂಜ್ ಎಪಿಎಂಸಿ ಹತ್ತಿರ ಮತ್ತು ಸ್ವಾರಗೇಟ್ ನಗರದ ವೈಷ್ಣಮಿ ಮಂದಿರದ ಸಾರ್ವಜನಿಕ ರಸ್ತೆಯಲ್ಲಿ ಮಟಕಾ, ಜೂಜಾಟವಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ನೆಹರು ಗಂಜ್‍ನ ಎಪಿಎಂಸಿ ಯಾರ್ಡ್‍ನಲ್ಲಿರುವ ಎಪಿಎಂಸಿ ಆಫೀಸ್ ಎದರುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆಯ ಎಎಸ್‍ಐ ಬಾಬುರಾವ, ಸಿಬ್ಬಂದಿಗಳಾದ ಸುರೇಶ, ಮೋಸಿನ್ ಅವರು ದಾಳಿ ನಡೆಸಿ ಗಂಗಾನಗರ ವಡ್ಡರಗಲ್ಲಿಯ ಬೆಳ್ಳಪ್ಪ ಸುಭಾಷ ಜಮಾದಾರ (32) ಎಂಬಾತನನ್ನು ಬಂಧಿಸಿ 2,540 ರೂ.ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಇನ್ನೊಂದೆಡೆ ನಗರದ ಸ್ವಾರಗೇಟ್ ನಗರದಲ್ಲಿರುವ ವೈಷ್ಣವಿ ಮಂದಿರಕ್ಕೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಗಳಾದ ವಿಠ್ಠಲ, ಶಶಿಕಾಂತ ಅವರು ದಾಳಿ ನಡೆಸಿ ಅಪ್ಪಾರಾಯ ಅರಗಡ, ಶರಣಬಸಪ್ಪ ಬಿಲಗುಂದಿ, ಭೀರಪ್ಪ ಪೂಜಾರಿ, ಸಂಜೀವಕುಮಾರ ಪಾಟೀಲ, ಅಶೋಕ ಬಿರಾದಾರ ಎಂಬುವವರನ್ನು ಬಂಧಿಸಿ 5150 ರೂ.ನಗದು ಮತ್ತು ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಚೌಕ್ ಮತ್ತು ಸಬ್-ಅರ್ಬನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.