ನುಲಿಯ ಚಂದಯ್ಯನವರ ವಚನಗಳಲ್ಲಿ ಕಾಯಕ ಮಹತ್ವದ ಚಿಂತನೆ
ವಿಜಯಪುರ, ಆ.20: 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಶರಣ ನುಲಿಯ ಚಂದಯ್ಯ ಅವರ ವಚನಗಳಲ್ಲಿ ಕಾಯಕ ಹಾಗೂ ದಾಸೋಹ ಮಹತ್ವದ ಚಿಂತನೆಗಳು ಹಾಸುಹೊಕ್ಕಾಗಿವೆ. ಇವರ ಜೀವನಾದರ್ಶ ಹಾಗೂ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲ್ಲಿ ಅಳವಡಿಸಿಕೊಳ್ಳಬೇಕು. ಇವರ ತತ್ವಾದರ್ಶ ಎಂದೆಂದಿಗೂ ದಾರಿದೀಪವಾಗಿವೆ ಎಂದು ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯ ಶಿವಣಗಿಯರಾದ ಶರಣ ನುಲಿಯ ಚಂದಯ್ಯನವರು, ಕಾಯಕ ತತ್ವದ ಮಹತ್ವವನ್ನು ವಚನಗಳ ಮೂಲಕ ಸಾರಿ, ಭಾವಶುದ್ಧತೆಯಿಂದ ಕಾಯಕ ಮಾಡಬೇಕೆನ್ನುವ ನಿಟ್ಟಿನಲ್ಲಿ ಜೀವನ ನಡೆಸಿ ಮನುಕುಲದ ಉನ್ನತಿಗೆ ಶ್ರಮಿಸಿದ್ದಾರೆ. ಅವರ ವಿಚಾರಗಳನ್ನು ಅಳವಡಿಸಿಕೊಂಡು ಆದರ್ಶಮಯವಾದ ಜೀವನ ನಡೆಸಬೇಕು ಎಂದು ಹೇಳಿದರು.
ಪ್ರವಾಸೊಧ್ಯಮ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಅವರು ಮಾತನಾಡಿ, ಶರಣರ ಚಿಂತನೆಗಳ ಅಧ್ಯಯನ ಮಾಡುವ ಮೂಲಕ ಅವರ ಶರಣರ ವಚನಗಳು ಹಾಗೂ ಸಂದೇಶಗಳ ಸಾರ ಇಂದಿನ ಯುವ ಜನತೆ ಅರಿತುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾವತಿ ಅಂಕಲಗಿ ಅವರು ಉಪನ್ಯಾಸ ನೀಡಿ,ಶರಣ ಅನುಭಾವಿ, ವಚನಕಾರ ನುಲಿಯ ಚಂದಯ್ಯ ಅವರ ಕಾಯಕ ನಿμÉ್ಠ ಅಪಾರ. ಅವರ ವಚನಗಳಲ್ಲಿ ಸಮಸಮಾಜದ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಕವಾಗಿವೆ. ವಿಜಯಪುರ ಜಿಲ್ಲೆಯ ಶಿವಣಗಿ ಚಂದಯ್ಯ ಅವರ ಹುಟ್ಟೂರು. ಬಸವಾದಿ ಶರಣರೊಂದಿಗೆ ಅನುಭವ ಮಂಟಪದಲ್ಲಿದ್ದ ಶರಣ ಚಂದಯ್ಯ ಚಂದೇಶ್ವರಲಿಂಗ ಎಂಬ ನಾಮಾಂಕಿತದಿಂದ ತಮ್ಮ ವಚನಗಳನ್ನು ರಚಿಸಿದ್ದಾರೆ ಎಂದರು.
ಗೋವಿಂದರಾವ್ ವಾಜಂತ್ರಿ ಅವರು ಮಾತನಾಡಿದರು. ಶ್ರೀಮತಿ ದಾನಮ್ಮ ಅಲ್ದಿ ಹಾಗೂ ಸಂಗಡಿಗರು ಸುಮಧುರ ವಚನ ಗಾಯನ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ವಿಭಾಗದ ಅಧಿಕಾರಿ ಎ.ಬಿ. ಅಲ್ಲಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ರವೀಂದ್ರ ಜಾಧವ, ಶ್ರೀದೇವಿ ಉತ್ಲಾಸಕರ್, ಕೃಷ್ಣ ಭಜಂತ್ರಿ, ವಸಂತ ಭಜಂತ್ರಿ, ಅಶೋಕ್ ಜಾಧವ್, ಭೀಮಶಿ ಭಜಂತ್ರಿ, ಗಿರಿಮಲ್ಲಪ್ಪ ಭಜಂತ್ರಿ, ಹಣಮಂತ ಭಜಂತ್ರಿ ದರ್ಗಾ, ದೇವೆಂದ್ರ ಮಿರೇಕರ, ಸುಭಾಸ್ ಕನ್ನೂರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆಗೆ ಚಾಲನೆ:
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 9.30 ಗಂಟೆಗೆ ಆರಂಭವಾದ ನುಲಿ ಚಂದಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ಕರ್ನಾಟಕ ಬಾಲವಿಕಾಸ ಅಕಾಡಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಚಾಲನೆ ನೀಡಿದರು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪ್ರವಾಸೊಧ್ಯಮ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ಉಪಸ್ಥಿತರಿದ್ದರು.
ಮೆರವಣಿಗೆಯು ಕಲಾ ತಂಡದೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದಿಂದ ಆಗಮಿಸಿ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.