ಎಂ.ಎಸ್.ಐ ಕಾಲೇಜಿನಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ
ಕಲಬುರಗಿ:ಅ.1:ನಗರದ ಎಂ.ಎಸ್.ಐ ಪದವಿ ಪೂರ್ವ ಕಾಲೇಜಿನಲ್ಲಿ ‘ನೆಹರು ಯುವ ಕೇಂದ್ರ’, ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಕಲಬುರಗಿ ಯೂತ್ ಅಡ್ವೆಂಚರ್ ಸ್ಪೋಟ್ಸ್ ಅಸೋಸಿಯೇಷನ್’, ‘ತೃಪಿ ಫೌಂಡೇಶನ್’ ಮತ್ತು ‘ಎಂ.ಎಸ್.ಐ ಕಾಲೇಜು’ ಇವುಗಳ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಪ್ರಯುಕ್ತ ಮಂಗಳವಾರ ಕಾಲೇಜಿನಲ್ಲಿ ‘ಸ್ವಚ್ಛತೆಯೇ ಸೇವೆ’ ವಿಶೇಷ ಕಾರ್ಯಕ್ರಮ ಜರುಗಿತು. ಸ್ವಚ್ಛತಾ ಕಾರ್ಯ ಮಾಡಲಾಯಿತು. ಪ್ರತಿಜ್ಞೆ ವಿಧಿ ಸ್ವೀಕರಿಸಲಾಯಿತು.
ನಂತರ ಮಾತನಾಡಿದ ಎನ್.ಎಸ್.ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ, ಸ್ವಚ್ಛತೆ ಕೇವಲ ಸರ್ಕಾರ, ಪೌರ ಕಾರ್ಮಿಕರು, ಕೆಲವು ಸಂಘ-ಸಂಸ್ಥೆಗಳ ಕಾರ್ಯವಾಗದೆ ಸಾಮೂಹಿಕ ಜವಾಬ್ದಾರಿಯಾಗಿದೆ. ಮನೆ ಹಾಗೂ ಸುತ್ತ-ಮುತ್ತಲಿನ ಪರಿಸರದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬಯಲು ಶೌಚಾಲಯ ಎಂದಿಗೂ ಬೇಡ. ಪ್ಲಾಸಿಕ್‍ಗೆ ಪರ್ಯಾಯ ಬಳಕೆ ಮಾಡಬೇಕು. ಸ್ವಚ್ಛ ಭಾರತದ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಕಾಲೇಜಿನ ಪ್ರಾಂಶುಪಾಲೆ ಶಿಲ್ಪಾ ಅಲ್ಲದ್, ಉಪನ್ಯಾಸಕ ಐ.ಕೆ.ಪಾಟೀಲ, ‘ಕಲಬುರಗಿ ಯೂತ್ ಅಡ್ವೆಂಚರ್ ಸ್ಪೋಟ್ಸ್ ಅಸೋಸಿಯೇಷನ್’ನ ಅಧ್ಯಕ್ಷ ದೇವರಾಜ ಆರ್.ಕನ್ನಡಗಿ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.