ಪವಿತ್ರ ಪ್ರೀತಿಯ ಸಂಕೇತವೇ ರಕ್ಷಾ ಬಂಧನ
ಕಮಲನಗರ :ಆ.20: ‘ನೂಲ ಹುಣ್ಣಿಮೆಯು ಪವಿತ್ರ ಪ್ರೀತಿಯ ಸಂಕೇತವಾಗಿದೆ. ಅಕ್ಕ-ತಂಗಿಯರು ಪ್ರೀತಿಯ ಹೊನಲು ಹರಿಸಿ, ಅತ್ಯಂತ ಕಾಳಜಿಪೂರ್ವಕವಾಗಿ ತಮ್ಮ ಸಹೋದರರಿಗೆ ಶುಭ ಕೋರಿ ಉತ್ತಮ ವ್ಯಕ್ತಿಗಳಾಗುವಂತೆ ಪ್ರೇರಣೆ ನೀಡುತ್ತಾರೆ’ ಎಂದು ಶಾಸ್ತ್ರೀ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಅಜೀತಕುಮಾರ ಶಾಸ್ತ್ರಿ ಹೇಳಿದರು.
ಪಟ್ಟಣದ ಭಾಗೀರಥಿ ಪಬ್ಲಿಕ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಆರಂಭ. ಭಾರತೀಯ ಪರಂಪರೆಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಬಹಳ ಮಹತ್ವವಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಕ್ಷೆ ಕೋರಿ ರಕ್ಷಾ ಬಂಧನ ಕಟ್ಟುವ ಭಾವನಾತ್ಮಕ ಮತ್ತು ಪವಿತ್ರ ಹಬ್ಬವಿದು. ಇತಿಹಾಸ ಪುರಾಣಗಳಲ್ಲಿ ರಕ್ಷಾ ಬಂಧನವು ಮೃತ್ಯುವನ್ನೇ ದೂರ ಮಾಡುವ ಶಕ್ತಿಶಾಲಿ ದಾರವೆಂದು ಬಣ್ಣಿಸಲಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ತಾಲೂಕು ಮೇಲ್ವಿಚಾರಕ ಮಹೇಶ ಬೆಳಗಾಂವಕರ್ ಮಾತನಾಡಿ, ಪ್ರಾಚೀನ ಇತಿಹಾಸ ಹೊಂದಿರುವ ಈ ಪವಿತ್ರ ರಕ್ಷಾ ಬಂಧನ ಆಚರಣೆಗೆ ವಿಶೇಷ ಅರ್ಥವಿದೆ. ಬಾಂಧವ್ಯಕ್ಕೆ ಗೌರವ ನೀಡುವ ಈ ಹಬ್ಬದಲ್ಲಿ ರಾಖಿಯನ್ನು ಪರಸ್ಪರ ಕೈಗೆ ಕಟ್ಟಿಕೊಂಡು ರಕ್ಷಣೆಯ ಸಂಕಲ್ಪ ತೊಡಬೇಕಿದೆ ಎಂದು ಹೇಳಿದರು.
ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಬಸ್ವರಾಜ ಪಾಟೀಲ್, ನಿವೃತ್ತ ದೈ.ಶಿ ಯಶವಂತ ಬಿರಾದಾರ, ಸ್ವಯಂ ಸೇವಾ ಸಂಘದ ಪ್ರಮುಖ ಪ್ರಶಾಂತ ಖಾನಾಪೂರೆ, ಮುಖ್ಯ ಶಿಕ್ಷಕ ಮನೋಜಕುಮಾರ ಹಿರೇಮಠ, ಶಿಕ್ಷಕ ಸಿಬ್ಬಂದಿಗಳಾದ ರಾಜಶ್ರೀ ಸಿರಗೀರೆ, ಶೀತಲ ಹಂಗರಗೆ, ಅಚಿಜಲಿ ಸ್ವಾಮಿ, ಶ್ರೀದೇವಿ ಸೋನಕಾಂಬಳೆ, ಶೇಖ ಇಜಾಜ, ದೀಪಮಾಲಾ, ಉಷಾ, ಅಶ್ವೀನಿ ಹಾಜರಿದ್ದರು.